ಭಾರತ ಉಗ್ರ ಎಂದು ಘೋಷಿಸಿದ ವ್ಯಕ್ತಿ ನಮ್ಮ ಉದ್ಯೋಗಿ: ಕೆನಡಾ
ಸಂದೀಪ್ ಸಿಂಗ್ ಸಿಧು PC: x.com/ShivAroor
ಹೊಸದಿಲ್ಲಿ: ಪಂಜಾಬ್ ನ ತಾರ್ನ್ ತರಣ್ ನಲ್ಲಿ 2020ರ ಅಕ್ಟೋಬರ್ ನಲ್ಲಿ ನಡೆದ ಶೌರ್ಯ ಚಕ್ರ ಪುರಸ್ಕೃತ ಬಲ್ವೀಂದರ್ ಸಿಂಗ್ ಸಂಧು ಅವರ ಹತ್ಯೆ ಪ್ರಕರಣದ ಸಂಚುಗಾರ ಸಂದೀಪ್ ಸಿಂಗ್ ಸಿಧು ಅಲಿಯಾಸ್ ಸನ್ನಿ ಟೊರಾಂಟೊ ತನ್ನ ಉದ್ಯೋಗಿ ಎಂದು ಕೆನಡಾ ಒಪ್ಪಿಕೊಂಡಿದೆ. ಆದರೆ ಆತ ಭಾರತದಲ್ಲಿ ಯಾವುದೇ ಅಪರಾಧ ಕೃತ್ಯದಲ್ಲಿ ಷಾಮೀಲಾಗಿಲ್ಲ ಎಂದು ಕೆನಡಿಯನ್ ಗಡಿ ಭದ್ರತಾ ಏಜೆನ್ಸಿ ಸಮರ್ಥಿಸಿಕೊಂಡಿದೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಆಪಾದಿಸಿದ್ದರೂ, ಈ ಬಗ್ಗೆ ಯಾವುದೇ ಪುರಾವೆಯನ್ನು ಇದುವರೆಗೆ ನೀಡಿಲ್ಲ.
"ಎಲ್ಲ ಸಿಬಿಎಸ್ಎ ಉದ್ಯೋಗಿಗಳನ್ನು ಅವರ ಉದ್ಯೋಗಕ್ಕೆ ಮುನ್ನ ತಪಾಸಣೆ ನಡೆಸಿ ಪರಾಮರ್ಶೆ ನಡೆಸಲಾಗುತ್ತದೆ. ಜತೆಗೆ ಅರೋಪಗಳ ಬಗ್ಗೆ ಅವರ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ನಿಯತವಾಗಿ ಅವರ ವೃತ್ತಿ ಜೀವನದುದ್ದಕ್ಕೂ ಇಂಥ ಪರೀಕ್ಷೆ ನಡೆಸಲಾಗುತ್ತದೆ. ಸಿಧು ಮೇಲೆ ಮಾಡಿರುವ ಆರೋಪಗಳಿಗೆ ಪೂರಕವಾದ ಯಾವುದೇ ಪುರಾವೆಗಳಿಲ್ಲ ಎಂದು ಸಿಬಿಎಸ್ಎ ದೃಢಪಡಿಸುತ್ತದೆ" ಎಂದು ಸ್ಪಷ್ಟನೆ ನೀಡಿದೆ.
ಸಿಧು ಗಡೀಪಾರಿಗೆ ಭಾರತ ಅಧಿಕೃತ ಬೇಡಿಕೆ ಸಲ್ಲಿಸಿದ್ದು, ಸಿಬಿಎಸ್ಎ ಭಾಗವಾಗಿರುವ ಕೆನಡಾ ಭದ್ರತಾ ಗುಪ್ತಚರ ಸೇವೆಗಳ ಇಲಾಖೆಯ ಜತೆ ನಿಕಟ ಸಂಪರ್ಕದಲ್ಲಿದೆ. ಈತ ನಿಷೇಧಿತ ಅಂತರಾಷ್ಟ್ರೀಯ ಸಿಕ್ಖ್ ಯುವ ಒಕ್ಕೂಟದ ಸದಸ್ಯನಾಗಿದ್ದು, ಈ ಹಿನ್ನೆಲೆಯಲ್ಲಿ ಕೆನಡಾದಿಂದ ಉಗ್ರಗಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾನೆ ಎಂದು ಭಾರತ ಆಪಾದಿಸಿದೆ.
ವೃತ್ತಿಯಲ್ಲಿ ಶಿಕ್ಷಕರಾಗಿದ್ದೂ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ಶೌರ್ಯಚಕ್ರ ಪಡೆದ ಸಂಧು ಹತ್ಯೆಯ ಸಂಚಿನ ರೂವಾರಿ ಎನಿಸಿದ ಈತ ಭಾರತ ವಿರೋಧಿ ಸಂಚಿನಲ್ಲಿ ಪಾಕಿಸ್ತಾನದ ಐಎಸ್ಐ ಜತೆಗೆ ಸೇರಿ ಹಲವು ಉಪ ಸಂಚುಗಳನ್ನು ರೂಪಿಸಿದ್ದ ಎಂದು ಆಪಾದಿಸಲಾಗಿದೆ.