ಮೈತೈ ಉಗ್ರವಾದಿ ಗುಂಪುಗಳ ವಿರುದ್ಧ ಮೊಕದ್ದಮೆ ದಾಖಲಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ (PTI)
ಇಂಫಾಲ: ಅರಂಬಾಯಿ ಟೆಂಗೋಲ್ ಮತ್ತು ಮೇತೈ ಲೀಪುನ್ ಸೇರಿದಂತೆ, ಕುಕಿ- ರೆ ಸಮುದಾಯಕ್ಕೆ ಸೇರಿದ ಜನರನ್ನು ಅಪಹರಿಸಿವೆ ಎನ್ನಲಾದ ಉಗ್ರವಾದಿ ಮೆತೈ ಗುಂಪುಗಳ ವಿರುದ್ಧ ಮಣಿಪುರ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ನ.7ರಂದು, ಕಾಂಗ್ಚುಪ್ ಚಿಂಗ್ಖೊಂಗ್ ಗ್ರಾಮದ ಚೆಕ್ ಪೋಸ್ಟ್ ಸಮೀಪ ಮೆತೈ ಜನರ ಗುಂಪೊಂದು ಪೊಲೀಸರು ಮತ್ತು ಕೇಂದ್ರೀಯ ಭದ್ರತಾ ಪಡೆಗಳ ಸಮ್ಮುಖದಲ್ಲೇ ಇಬ್ಬರು ಮಹಿಳೆಯರು ಸೇರಿದಂತೆ ಐವರು ಕುಕಿ-ರೊ ಸಮುದಾಯದ ಜನರನ್ನು ಅಪಹರಿಸಿತ್ತು ಎನ್ನಲಾಗಿದೆ. ಕುಕಿ-ರೊ ಸಮುದಾಯದ ಜನರು ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ಎಲ್. ಫೈಜಾಂಗ್ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು.
ಅಪಹೃತರ ಪೈಕಿ ಇಬ್ಬರ- ಓರ್ವ ಪುರುಷ ಮತ್ತು ಓರ್ವ ಮಹಿಳೆ- ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ನ.9ರಂದು ಹೇಳಿದ್ದರು. ಅಪಹೃತರ ಪೈಕಿ 65 ವರ್ಷದ ವ್ಯಕ್ತಿಯೊಬ್ಬರನ್ನು ಭದ್ರತಾ ಪಡೆಗಳು ಅಪಹರಣದ ದಿನದಂದೇ ರಕ್ಷಿಸಿದ್ದವು. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.
ಈ ವರ್ಷದ ಮೇ ತಿಂಗಳಿನಿಂದ ಮಣಿಪುರದಲ್ಲಿ ಮೆತೈ ಮತ್ತು ಕುಕಿ ಸಮುದಾಯಗಳ ಜನರ ನಡುವೆ ಸಂಘರ್ಷ ನಡೆಯುತ್ತಿದೆ. 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 60,000ಕ್ಕೂ ಹೆಚ್ಚು ಮಂದಿ ತಮ್ಮ ಮನೆಗಳನ್ನು ತೊರೆದು ಪರಾರಿಯಾಗಿದ್ದಾರೆ.
ಅಪಹೃತರ ಪೈಕಿ ಒಬ್ಬರ ಕುಟುಂಬ ಸದಸ್ಯರು ನೀಡಿರುವ ದೂರಿನಂತೆ ಮೆತೈ ಗುಂಪುಗಳ ವಿರುದ್ಧ ಮೊಕದದಮೆ ದಾಖಲಿಸಲಾಗಿದೆ.
ಇಂಫಾಲ ಕಣಿವೆಯಲ್ಲಿ ಮೆತೈ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಪರ್ವತ ಜಿಲ್ಲೆಗಳಲ್ಲಿ ಕುಕಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.