ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯ ಗರ್ಭಪಾತಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಅತ್ಯಾಚಾರಕ್ಕೊಳಗಾಗಿ 29 ವಾರಗಳ ಗರ್ಭಿಣಿಯಾಗಿರುವ ಮಹಾರಾಷ್ಟ್ರದ 14ರ ಹರೆಯದ ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಿದ್ದ ತನ್ನ ಎ.22ರ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹಿಂದೆಗೆದುಕೊಂಡಿದೆ.
ಗರ್ಭಪಾತಕ್ಕೊಳಗಾದರೆ ತಮ್ಮ ಪುತ್ರಿಯು ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು ಎಂದು ಬಾಲಕಿಯ ಹೆತ್ತವರು ಕಳವಳ ವ್ಯಕ್ತಪಡಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಹೊಸ ಆದೇಶವನ್ನು ಹೊರಡಿಸಿತು.
ಕಾನೂನಿನಂತೆ 20 ವಾರಗಳ ಗರ್ಭಿಣಿಯರು ವೈದ್ಯಕೀಯ ಗರ್ಭಪಾತವನ್ನು ಮಾಡಿಸಿಕೊಳ್ಳಲು ಅವಕಾಶವಿದೆ. ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೊಳಗಾದ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕ ಬಾಲಕಿಯರಿಗೆ ಗರ್ಭಾವಸ್ಥೆಯ 24 ವಾರಗಳವರೆಗೂ ಕಾಲಾವಕಾಶವಿದೆ.
ಬಾಲಕಿ ಮತ್ತು ಆಕೆಯ ಹೆತ್ತವರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಖಾಸಗಿಯಾಗಿ ಚರ್ಚಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ನ್ಯಾ.ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠವು ಮಗುವಿನ ಹಿತಾಸಕ್ತಿಯು ಪರಮೋಚ್ಚವಾಗಿರುವುದರಿಂದ ತನ್ನ ಹಿಂದಿನ ಆದೇಶವನ್ನು ಹಿಂದೆಗೆದುಕೊಳ್ಳುವ ಅಗತ್ಯವನ್ನು ಅವರಿಗೆ ತಿಳಿಸಿತು.
ತಾವು ಪುತ್ರಿಯನ್ನು ಮನೆಗೆ ಕರೆದೊಯ್ಯುತ್ತೇವೆ ಮತ್ತು ಆಕೆಗೆ ಹೆರಿಗೆ ಮಾಡಿಸುತ್ತೇವೆ ಎಂದು ಹೆತ್ತವರು ನ್ಯಾಯಾಲಯಕ್ಕೆ ತಿಳಿಸಿದರು.
ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ನಿಗದಿತ 24 ವಾರಗಳ ಗಡುವಿನ ಬಳಿಕ ಈ ಬಗ್ಗೆ ಮಹಾರಾಷ್ಟ್ರದ ನವಿಮುಂಬೈನಲ್ಲಿ 2024, ಮಾ.20ರಂದು ಎಫ್ಐಆರ್ ದಾಖಲಾಗಿತ್ತು. ಬಾಲಕಿಗೆ ತಾನು ಗರ್ಭವತಿಯಾಗಿದ್ದು ತುಂಬ ತಡವಾಗಿ ಗೊತ್ತಾಗಿತ್ತು ಎಂದು ಆಕೆಯ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ವಾದಿಸಲಾಗಿತ್ತು.
ಅತ್ಯಾಚಾರ ಆರೋಪಿಯನ್ನು ಪೋಲಿಸರು ಬಂಧಿಸಿದ್ದು, ಪೊಕ್ಸೊ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
‘ಸರಿಯುತ್ತಿರುವ ಪ್ರತಿಯೊಂದೂ ಗಂಟೆಯು ಬಾಲಕಿಯ ಪಾಲಿಗೆ ನಿರ್ಣಾಯಕವಾಗಿದೆ. ಹೀಗಾಗಿ ಅತ್ಯಂತ ಅಸಾಧಾರಾಣ ಪ್ರಕರಣಗಳಲ್ಲಿ ನಾವು ಮಕ್ಕಳನ್ನು ರಕ್ಷಿಸಬೇಕಾಗುತ್ತದೆ ’ಎಂದು ನ್ಯಾ.ಚಂದ್ರಚೂಡ್ ನೇತೃತ್ವದ ಪೀಠವು ಸೋಮವಾರ ಹೇಳಿತು.
ಬಾಂಬೆ ಉಚ್ಚ ನ್ಯಾಯಾಲಯವು ಗರ್ಭಪಾತಕ್ಕೆ ಅನುಮತಿಯನ್ನು ನಿರಾಕರಿಸಿದ ಬಳಿಕ ಬಾಲಕಿಯ ತಾಯಿ ಎ.4ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಬಾಲಕಿಯ ಸ್ಥಿತಿ ಮತ್ತು ಗರ್ಭಾವಸ್ಥೆಯ ಮುಂದುವರಿಕೆಯಿಂದ ಆಕೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಸೂಚಿಸಿದ್ದ ವೈದ್ಯಕೀಯ ವರದಿಯನ್ನು ಪರಿಗಣಿಸಿದ್ದ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ 142ನೇ ವಿಧಿಯಡಿ ತನ್ನ ಅಧಿಕಾರವನ್ನು ಬಳಸಿ ವೈದ್ಯಕೀಯ ಗರ್ಭಪಾತಕ್ಕೆ ಆದೇಶಿಸಿತ್ತು. ಬಾಲಕಿಯ ವೈದ್ಯಕೀಯ ಗರ್ಭಪಾತವನ್ನು ಮಾಡಲು ತಜ್ಞ ವೈದ್ಯರ ತಂಡವೊಂದನ್ನು ರಚಿಸುವಂತೆ ಮುಂಬೈನ ಸಯನ್ ಆಸ್ಪತ್ರೆಯ ಡೀನ್ ಗೆ ನಿರ್ದೇಶವನ್ನೂ ನೀಡಿದ್ದ ಸರ್ವೋಚ್ಚ ನ್ಯಾಯಾಲಯವು ಸರಕಾರದ ವೆಚ್ಚದಲ್ಲಿ ವೈದ್ಯಕೀಯ ಗರ್ಭಪಾತ ನಡೆಸುವಂತೆ ಎ.22ರಂದು ಮಧ್ಯಂತರ ಆದೇಶವನ್ನು ಹೊರಡಿಸಿತ್ತು.