“ನಾನು ತಪ್ಪು ಮಾಡಿದ್ದೇನೆ " ಎಂದು ವೀಡಿಯೋ ಮಾಡಿ ಕ್ಷಮೆಯಾಚಿಸಿದ ಶಿಕ್ಷಕಿ
ವಿದ್ಯಾರ್ಥಿಗೆ ಕಪಾಳ ಮೋಕ್ಷ ಪ್ರಕರಣ
Photo: NDTV
ವಿದ್ಯಾರ್ಥಿಗೆ ಕಪಾಳ ಮೋಕ್ಷ ಪ್ರಕರಣ
ಹೊಸದಿಲ್ಲಿ : ಉತ್ತರ ಪ್ರದೇಶದ ಕಪಾಳ ಮೋಕ್ಷ ಪ್ರಕರಣದ ಶಿಕ್ಷಕಿ ತೃಪ್ತಿ ತ್ಯಾಗಿ, ಮುಸ್ಲಿಂ ವಿದ್ಯಾರ್ಥಿಗೆ ಸಹಪಾಠಿಗಳಿಂದ ಕಪಾಳ ಮೋಕ್ಷ ಮಾಡಿಸಿದ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೋಮು ಭಾವನೆ ಕೆರಳಿಸುವ ಯಾವುದೇ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವೀಡಿಯೋ ಒಂದನ್ನು ಹರಿಬಿಟ್ಟಿದ್ದು, ಕೈ ಮುಗಿದು ಮತ್ತೆ ಮತ್ತೆ ಕ್ಷಮೆ ಕೇಳಿರುವ ಶಿಕ್ಷಕಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಮುಝಾಫರ್ ನಗರದ ನೇಹಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆಯೂ ಆಗಿರುವ ಶಿಕ್ಷಕಿ ತಮ್ಮ ವೀಡಿಯೋ ಸಂದೇಶದಲ್ಲಿ “ನಾನು ತಪ್ಪು ಮಾಡಿದ್ದೇನೆ. ಆದರೆ ಹಿಂದು ಮುಸ್ಲಿಂ ಭಾವನೆ ನನ್ನಲ್ಲಿರಲಿಲ್ಲ. ಮಕ್ಕಳು ಹೋಂ ವರ್ಕ್ ಮಾಡಿರಲಿಲ್ಲ. ಅವರಿಗೆ ಸರಿಯಾಗಿ ಪಾಠಗಳನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎನ್ನುವುದಷ್ಟೇ ನನ್ನ ಉದ್ದೇಶ” ಎಂದ್ದಿದ್ದಾರೆ.
ನಾನು ಅಂಗವಿಕಲೆಯಾಗಿದ್ದು, ಎದ್ದು ನಿಲ್ಲಲು ನನಗೆ ಆಗುವುದಿಲ್ಲ. ಹಾಗಾಗಿ ಉಳಿದ ವಿದ್ಯಾರ್ಥಿಗಳಲ್ಲಿ ಆತನಿಗೆ ಕಪಾಳಕ್ಕೆ ಹಲವುಬಾರಿ ಬಾರಿಸಲು ಹೇಳಿದೆ. ಆತ ಶೈಕ್ಷಣಿಕ ಪ್ರಗತಿ ಸಾಧಿಸಲಿ ಎಂಬ ಉದ್ದೇಶ ನನ್ನದಾಗಿತ್ತು ಎಂದು ತಿಳಿಸಿದ್ದಾರೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ ಕಾನೂನು ಕ್ರಮ ಎದುರಿಸುತ್ತಿರುವ ಹಿರಿಯ ಶಿಕ್ಷಕಿ ತೃಪ್ತಿ ತ್ಯಾಗಿ, ತಮ್ಮ ವೀಡಿಯೊವನ್ನು ಹಿಂದೂ ಮುಸ್ಲಿಂ ಸಮಸ್ಯೆ ಎಂದು ಬಿಂಬಿಸಲು ಬಳಕೆ ಮಾಡಲಾಗುತ್ತಿದೆ. ನನ್ನ ಮನಸ್ಸಿನಲ್ಲಿ ವಿದ್ಯಾರ್ಥಿಗಳನ್ನು ಹಿಂದೂ ಮುಸ್ಲಿಂ ಎಂದು ಒಡೆಯುವ ಚಿಂತನೆಯಿಲ್ಲ. ಬಹಳಷ್ಟು ಮುಸ್ಲಿಂ ಪೋಷಕರ ಬಳಿ ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಣವಿಲ್ಲ. ಅವರೆಲ್ಲರಿಗೂ ನಾನು ಉಚಿತವಾಗಿ ಶಿಕ್ಷಣ ನೀಡುತ್ತಿದ್ದೇನೆ. ಮುಸ್ಲಿಂ ವಿದ್ಯಾರ್ಥಿಗೆ ತೊಂದರೆ ಕೊಡಬೇಕೆಂಬ ಉದ್ದೇಶ ನನ್ನಲ್ಲಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಶಾಲೆಯನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳನ್ನು ಹತ್ತಿರದ ಶಾಲೆಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಘಟನೆಯ ಬಳಿಕ ಬಾಲಕ ಖಿನ್ನತೆಗೆ ಒಳಗಾಗಿದ್ದು, ಕೆಲ ದಿನಗಳ ಕಾಲ ಸರಿಯಾಗಿ ಆಹಾರವನ್ನೂ ಸೇವಿಸುತ್ತಿರಲಿಲ್ಲ ಎಂದು ಬಾಲಕನ ತಂದೆ ತಿಳಿಸಿದ್ದಾರೆ.