ಚುನಾವಣಾ ರ್ಯಾಲಿ ವೇಳೆ ತೆಲಂಗಾಣ ಸಚಿವ ಕೆಟಿಆರ್ ರಾವ್ ವಾಹನದಿಂದ ಬಿದ್ದ ವೀಡಿಯೋ ವೈರಲ್!
Photo : ANI video grab
ಹೈದರಾಬಾದ್: ಆಡಳಿತಾರೂಢ ಬಿಆರ್ಎಸ್ನ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ತೆರೆದ ಛಾವಣಿಯ ಪ್ರಚಾರ ವಾಹನದಿಂದ ಬಿದ್ದ ಘಟನೆ ನಿಝಾಮಾಬಾದ್ ಜಿಲ್ಲೆಯ ಅರ್ಮೂರ್ ಪಟ್ಟಣದಲ್ಲಿ ಗುರುವಾರ ನಡೆದಿದೆ.
ವಾಹನದ ಚಾಲಕ ಬ್ರೇಕ್ ಹಾಕಿದ ಪರಿಣಾಮ ತೆರೆದ ಛಾವಣಿಯ ಪ್ರಚಾರ ವಾಹನದಲ್ಲಿದ್ದ ರಾಮರಾವ್ ಅವರು ಸಮತೋಲನ ಕಳೆದುಕೊಂಡು ಬಿದ್ದಿದ್ದಾರೆ.
ತೆಲಂಗಾಣ ಸಚಿವ ರಾಮರಾವ್ ಹಾಗೂ ಬಿಆರ್ಎಸ್ನ ರಾಜ್ಯ ಸಭಾ ಸದಸ್ಯ ಕೆ.ಆರ್. ಸುರೇಶ್ ರೆಡ್ಡಿ ಅವರು ತೆಲಂಗಾಣ ವಿಧಾನ ಸಭೆಗೆ ನಾಮಪತ್ರ ಸಲ್ಲಿಸಲಿರುವ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಜೀವನ್ ರೆಡ್ಡಿ ಅವರೊಂದಿಗೆ ತೆರೆದ ಛಾವಣಿಯ ಚುನಾವಣಾ ಪ್ರಚಾರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
ಘಟನೆಯ ವೀಡಿಯೊದಲ್ಲಿ ಚಾಲಕ ಬ್ರೇಕ್ ಹಾಕಿದ ಪರಿಣಾಮ ತೆರೆದ ಮೇಲ್ಛಾವಣಿಯ ಪ್ರಚಾರ ವಾಹನದಲ್ಲಿದ್ದ ರಾಮ ರಾವ್, ಸಂಸದ ಹಾಗೂ ಶಾಸಕರು ಇದ್ದಕ್ಕಿದ್ದಂತೆ ಕೆಳಗೆ ಬೀಳುತ್ತಿರುವುದನ್ನು ದಾಖಲಾಗಿದೆ.
ಮಧ್ಯದಲ್ಲಿ ನಿಂತಿದ್ದ ರಾಮ ರಾವ್ ಅವರು ಮುಂದೆ ಮುಗ್ಗರಿಸಿದರು ಹಾಗೂ ವಾಹನದಲ್ಲಿ ಇರಿಸಲಾಗಿದ್ದ ಸ್ಪೀಕರ್ ಮೇಲೆ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಸಕರು ಹಾಗೂ ಸಂಸದರು ವಾಹನದಿಂದ ಬೀಳುವ ಸಂದರ್ಭ ವಾಹನದೊಂದಿಗೆ ಓಡಿ ಬಂದ ಪೊಲೀಸ್ ಸಿಬ್ಬಂದಿ ಅವರು ಬೀಳದಂತೆ ತಡೆದರು ಹಾಗೂ ಅವರು ರಸ್ತೆ ಮೇಲೆ ಬೀಳದಂತೆ ಹಿಡಿದುಕೊಂಡರು.
ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಕೂಡಲೇ ಅವರನ್ನು ಕಾರಿನಲ್ಲಿ ಕುಳ್ಳಿರಿಸಲಾಯಿತು. ಅನಂತರ ಅವರು ಮುಂದೆ ಸಾಗಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸ್ಪಲ್ಪ ಸಮಯದ ಬಳಿಕ ಜೀವನ್ ರೆಡ್ಡಿ ಅವರು ನಾಮಪತ್ರ ಸಲ್ಲಿಸಿದರು.