ಇದು ನಿಮ್ಮ ಅಂತ್ಯ... ನಾವು ಮತ್ತೆ ಹಿಂತಿರುಗಿ ಬಂದೆ ಬರುತ್ತೇವೆ : ಮಹುಆ ಮೊಯಿತ್ರಾ
ಸಂಸತ್ ಸ್ಥಾನದಿಂದ ವಜಾಗೊಂಡ ಬಳಿಕ ದಿಟ್ಟ ನಾಯಕಿಯ ನಿರ್ಭೀತ ಹೇಳಿಕೆ
ಮಹುಆ ಮೊಯಿತ್ರಾ | PTI
ಹೊಸದಿಲ್ಲಿ : ಶುಕ್ರವಾರ ಲೋಕಸಭೆಯಿಂದ ಉಚ್ಚಾಟನೆಗೊಂಡ ಬಳಿಕ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಹುಆ ಮೊಯಿತ್ರಾ ಅವರು ಸಂಸತ್ತಿನ ಹೊರಗೆ ನೀಡಿರುವ ಹೇಳಿಕೆ ಇಲ್ಲಿದೆ :
ಸಂಸತ್ತಿನ ಒಳಗೆ ಮಾತನಾಡಲು ಅವಕಾಶ ಇಲ್ಲದ ಕಾರಣ ಹೊರಗೆ ಮಾತನಾಡುತ್ತಿದ್ದೇನೆ.
INDIA ಒಕ್ಕೂಟದ ಜೊತೆಗಿರುವ ಎಲ್ಲಾ ಪಕ್ಷಗಳಿಗೂ ಧನ್ಯವಾದಗಳು. ನನಗೆ ಮತ್ತು ನನ್ನ ಪಕ್ಷದ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು.
17ನೇ ಲೋಕಸಭೆಯು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತು. ಆದರೆ 78 ಮಹಿಳಾ ಸದಸ್ಯರಲ್ಲಿ ಒಬ್ಬರನ್ನು ಬೇಟೆಯಾಡಿದ ಸಭೆಯಿದು.
ನಾನು ಬಂಗಾಳದ ಗಡಿ ಭಾಗದ ಕ್ಷೇತ್ರದಿಂದ ಬಂದಿದ್ದೇನೆ. ಈ ಸಭೆ ತನ್ನ ಸದಸ್ಯರ ನೈತಿಕ ಪ್ರೇರಣೆಗಾಗಿ ಸ್ಥಾಪಿಸಲಾದ ಎಥಿಕ್ಸ್ ಸಮಿತಿಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಮಾಡಬಾರದ್ದನ್ನೇ ಅದು ಮಾಡಿದೆ.
ಈ ಸಮಿತಿ ಮತ್ತು ಈ ವರದಿ ಕಾನೂನಿನಲ್ಲಿರುವ ಎಲ್ಲವನ್ನೂ ನಾಶ ಮಾಡಿದೆ. ನಾನು ತಪ್ಪಿತಸ್ಥಳೆಂದು ನೀವು ಕಂಡುಕೊಂಡಿರುವುದು ಅನೈತಿಕ ಮತ್ತು ಅದು ಸಮರ್ಥನೀಯವಲ್ಲ. ಇಬ್ಬರು ಖಾಸಗಿ ವ್ಯಕ್ತಿಗಳ ಲಿಖಿತ ಹೇಳಿಕೆಗಳ ಆಧಾರದ ಮೇಲೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಆದರೆ ಅವರ ಹೇಳಿಕೆಯಲ್ಲಿ ವೈರುಧ್ಯವಿದೆ. ಉದ್ಯಮಿಯೊಬ್ಬರ ವಾಣಿಜ್ಯ ಹಿತಾಸಕ್ತಿಗಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹಣ ತೆಗೆದುಕೊಂಡಿದ್ದೇನೆ ಎಂದು ದೂರುದಾರರು ಹೇಳುತ್ತಾರೆ. ನನ್ನ ಅಜೆಂಡಾವನ್ನು ಬೆಂಬಲಿಸಲು ಪ್ರಶ್ನೆಗಳನ್ನು ಅಪ್ಲೋಡ್ ಮಾಡುವಂತೆ ನಾನು ಅವರ ಮೇಲೆ ಒತ್ತಡ ಹೇರಿದ್ದೇನೆ ಎಂದು ಉದ್ಯಮಿ ಅಫಿಡವಿಟ್ ನಲ್ಲಿ ಹೇಳಿದ್ದಾರೆ. ಇವೆರಡೂ ಒಂದಕ್ಕೊಂದು ತದ್ವಿರುದ್ಧ. ಇಬ್ಬರಲ್ಲಿ ಒಬ್ಬರು ನನ್ನಿಂದ ದೂರವಾದ ನನ್ನ ಸಂಗಾತಿ. ಈ ವಿಚಾರದಲ್ಲಿ ನನಗೆ ಪಾಟೀ ಸವಾಲಿಗೆ ಅವಕಾಶ ನೀಡಬೇಕಿತ್ತು. ಆದರೆ ನೈತಿಕ ಸಮಿತಿಯು ಇದನ್ನು ಅರ್ಥಮಾಡಿಕೊಳ್ಳಲಿಲ್ಲ ಮತ್ತು ನನಗೆ ಶಿಕ್ಷೆ ವಿಧಿಸಿತು. ಹಣ ಮತ್ತು ಬಹುಮಾನ ಪಡೆದಿರುವ ಬಗ್ಗೆ ಸಮಿತಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ.
ಮೋದಿ ಸರಕಾರಕ್ಕೆ ನನ್ನ ಬಾಯಿ ಮುಚ್ಚಿಸುವ ಮೂಲಕ ಅದಾನಿ ಸಮಸ್ಯೆಯಿಂದ ಪಾರಾಗಬಹುದು ಎಂದು ಭಾವಿಸಿದರೆ, ನಾನು ಒಂದು ವಿಷಯ ಹೇಳುತ್ತೇನೆ, ನಿಮ್ಮ ಆತುರ ಮತ್ತು ವ್ಯವಸ್ಥೆಯ ದುರುಪಯೋಗ, ಅದಾನಿ ನಿಮಗೆ ಎಷ್ಟು ಮುಖ್ಯ ಎಂದು ಈ ಕಾಂಗರೂ ನ್ಯಾಯಾಲಯ ನಡೆದ ರೀತಿ ತೋರಿಸಿದೆ. ಸಂಸತ್ತಿನ ಮಹಿಳಾ ಸದಸ್ಯರಿಗೆ ತೊಂದರೆ ಕೊಡಲು ನೀವು ತುಂಬಾ ಪ್ರಯತ್ನಿಸುತ್ತೀರಿ. ನಾಳೆ ಸಿಬಿಐ ನನ್ನ ಮನೆಗೆ ಬರಲಿದೆ. ಮುಂದಿನ ಆರು ತಿಂಗಳವರೆಗೆ ಇದು ನನಗೆ ನೋವುಂಟು ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ.
ಆದರೆ 13,000 ಕೋಟಿ ರೂ.ಗಳ ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ಮತ್ತು ಈಡಿ ಅದಾನಿ ಬಳಿ ಏಕೆ ಹೋಗಲಿಲ್ಲ? ಲಾಗಿನ್ ಪೋರ್ಟಲ್ ಮೂಲಕ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆ ಎಂದು ನೀವು ಹೇಳುತ್ತೀರಾ? ಅದಾನಿ ಕಂಪೆನಿ ನಮ್ಮ ಎಲ್ಲಾ ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಖರೀದಿಸುತ್ತದೆ. ಅವರ ಷೇರುದಾರರೆಲ್ಲರೂ ವಿದೇಶಿ ವೃತ್ತಿಪರರು. ಗೃಹ ಸಚಿವಾಲಯ ಇದಕ್ಕೆಲ್ಲ ಅನುಮತಿಯೂ ನೀಡುತ್ತದೆ.
ರಮೇಶ್ ಬಿದುರಿ ಸಂಸತ್ತಿನಲ್ಲಿ ಎದ್ದುನಿಂತು ದಾನಿಶ್ ಅಲಿ ಎಂಬ ಸಂಸದರಿಗೆ "ಈ ಭಯೋತ್ಪಾದಕ, ಈ ಭಯೋತ್ಪಾದಕ" ಎಂದಾಗ ಯಾವುದೇ ಕ್ರಮ ಕೈಗೊಂಡಿಲ್ಲ. 20 ಕೋಟಿ ಮುಸ್ಲಿಮರನ್ನು ಪ್ರತಿನಿಧಿಸುವ 26 ಸಂಸತ್ ಸದಸ್ಯರಲ್ಲಿ ಒಬ್ಬರು ದಾನಿಶ್ ಅಲಿ. 303 ಸಂಸತ್ ಸದಸ್ಯರಿರುವ ಬಿಜೆಪಿಗೆ ಒಬ್ಬ ಮುಸ್ಲಿಂ ಸದಸ್ಯನೂ ಇಲ್ಲ.
ನೀವು ಅಲ್ಪಸಂಖ್ಯಾತರನ್ನು ದ್ವೇಷಿಸುತ್ತೀರಿ. ಮಹಿಳೆಯರನ್ನು ದ್ವೇಷಿಸುತ್ತೀರಿ. ನೀವು ಸ್ತ್ರೀ ಶಕ್ತಿಯನ್ನು ದ್ವೇಷಿಸುತ್ತೀರಿ. ನೀವು ಅಧಿಕಾರವನ್ನು ಕಿತ್ತು ಪಡೆಯಲು ಸಾಧ್ಯವಿಲ್ಲ. ನನಗೆ 49 ವರ್ಷ. ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ ಮತ್ತು ಹೊರಗೆ ನಿಮ್ಮೊಂದಿಗೆ ಹೋರಾಡುತ್ತೇನೆ. ಬೀದಿಗಿಳಿದು ಹೋರಾಟ ಮಾಡುತ್ತೇವೆ. ಪಂಜಾಬ್ ಸಿಂಧ್ ಗುಜರಾತ್ ದ್ರಾವಿಡ ಉತ್ಕಲ ಬಂಗಾ.. ಪಂಜಾಬ್ ನಿಮ್ಮ ಕೈಯ್ಯಲ್ಲಿ ಇಲ್ಲ. ದ್ರಾವಿಡವೂ ನಿಮ್ಮದಲ್ಲ. ಉತ್ಕಲ್ ಮತ್ತು ಬಂಗಾಳವು ನಿಮ್ಮ ಹತ್ತಿರವಿಲ್ಲ. ನೈತಿಕ ಸಮಿತಿಗೆ ಹೊರಹಾಕುವ ಅಧಿಕಾರವಿಲ್ಲ. ಇದು ನಿಮ್ಮ ಅಂತ್ಯ. ನಾವು ಮತ್ತೆ ಹಿಂತಿರುಗಿ ಬಂದೆ ಬರುತ್ತೇವೆ. ಮತ್ತು ನೀವು ಅಂತ್ಯವನ್ನು ನೋಡಲಿದ್ದೀರಿ.