ಬಾಬಾ ಸಿದ್ದಿಕ್ ಹತ್ಯೆ ಹಿಂದಿರುವವರನ್ನು ಗಲ್ಲಿಗೇರಿಸಲಾಗುವುದು: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ (PTI)
ಮುಂಬೈ: ಮಹಾರಾಷ್ಟ್ರ ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಮುಂಬೈ ಪೊಲೀಸರು ಕೊಂಚ ಮಟ್ಟಿನ ಯಶಸ್ಸು ಸಾಧಿಸಿದ್ದು, ಈ ನಡುವೆ, ಬಾಬಾ ಸಿದ್ದಿಕ್ ಹತ್ಯೆ ಹಿಂದಿರುವವರನ್ನು ಗಲ್ಲುಗೇರಿಸಲಾಗುವುದು ಎಂದು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂದೆ, "ಯಾರಿಗೂ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಬಾಬಾ ಸಿದ್ದಿಕ್ ಹಂತಕರು ಗಲ್ಲುಗೇರುವುದನ್ನು ನಾವು ಖಾತರಿ ಪಡಿಸಲಿದ್ದೇವೆ" ಎಂದು ಭರವಸೆ ನೀಡಿದ್ದಾರೆ.
ಬಾಬಾ ಸಿದ್ದಿಕ್ ಹಂತಕರ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ಪ್ರಗತಿಯಲ್ಲಿದ್ದು, ಈ ಹತ್ಯೆಯ ಪ್ರಮುಖ ಆರೋಪಿಯಾದ ಪಂಜಾಬ್ನ ಜಲಂಧರ್ ನಿವಾಸಿಯಾದ ಮುಹಮ್ಮದ್ ಝೀಶನ್ ಅಖ್ತರ್ಗೆ ಪೊಲೀಸರು ಬಲೆ ಬೀಸಿದ್ದಾರೆ. ಮುಹಮ್ಮದ್ ಝೀಶನ್ ಅಖ್ತರ್ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಸುಮಾರು ಒಂಬತ್ತು ಪ್ರಕರಣಗಳು ದಾಖಲಾಗಿವೆ.
ಬಾಬಾ ಸಿದ್ದಿಕ್ ಹತ್ಯೆಗೆ ಬಾಂದ್ರಾದಲ್ಲಿನ ಕೊಳೆಗೇರಿ ಪುನರ್ ಅಭಿವೃದ್ಧಿ ಪ್ರಾಧಿಕಾರ ಯೋಜನೆ ಕುರಿತು ಮೂಡಿದ್ದ ಭಿನ್ನಾಭಿಪ್ರಾಯ ಕೂಡಾ ಒಂದು ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.