ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಾನು ಪದಕ ಗೆಲ್ಲಲಿಲ್ಲ ಎಂದು ಸಂತಸ ಪಡುವವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ : ವಿನೇಶ್ ಫೋಗಟ್
ವಿನೇಶ್ ಫೋಗಟ್ | PC : PTI
ಸೋನಿಪತ್ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಾನು ಗೆಲ್ಲಲಿಲ್ಲ ಎಂದು ಸಂತಸ ಪಡುವವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಎಂದು ವಿನೇಶ್ ಫೋಗಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಟೀಕೆಗಳಿಗೆ ಸೋಮವಾರ ಪ್ರತಿಕ್ರಿಯಿಸಿದ ಕುಸ್ತಿಪಟು ವಿನೇಶ್ ಫೋಗಟ್, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆ ಸಂತೋಷಪಡುವವರನ್ನು, ದೇಶವನ್ನು ಅಗೌರವಿಸಿದ್ದಕ್ಕಾಗಿ ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ಗೆ ಸೇರ್ಪಡೆಗೊಂಡು, ಹರಿಯಾಣ ವಿಧಾನಸಭಾ ಚುನಾವಣೆಗೆ ಜೂಲಾನಾ ಕ್ಷೇತ್ರದ ಅಭ್ಯರ್ಥಿ ಎಂದು ಹೆಸರಿಸಲಾದ ಫೋಗಟ್, indiatodayಗೆ ನೀಡಿದ ಸಂದರ್ಶನದಲ್ಲಿ, "ಕಳೆದ 1.5 ವರ್ಷಗಳಿಂದ ನಾವು ಬಿಜೆಪಿ ನಾಯಕ, ಭಾರತದ ರೆಸ್ಲಿಂಗ್ ಫೆಡರೇಶನ್ (ಡಬ್ಲ್ಯುಎಫ್ಐ) ಮಾಜಿ ಮುಖ್ಯಸ್ಥ ಭೂಷಣ್ ಅವರಿಂದ ಇಂತಹ ಹೇಳಿಕೆಗಳನ್ನು ಕೇಳುತ್ತಿದ್ದೇವೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನಾನು ಪದಕ ಗೆಲ್ಲಲಿಲ್ಲ ಎಂದು ಅವರು ಸಂತೋಷಪಡುತ್ತಿದ್ದಾರೆ. ಆ ಪದಕವು ನನಗೆ ಸೇರಿದ್ದಲ್ಲ, ದೇಶಕ್ಕೆ ಸೇರಿದ್ದು. ಅವರು ಇಡೀ ದೇಶವನ್ನು ಅಗೌರವಿಸಿದ್ದಾರೆ ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.