‘ಇಂಡಿಯಾ’ ಹೆಸರು ಬದಲಾವಣೆ ವಿರೋಧಿಸುವವರು ದೇಶ ತೊರೆಯಬಹುದು: ಬಿಜೆಪಿ ನಾಯಕ ದಿಲಿಪ್ ಘೋಷ್
ಕೋಲ್ಕತ್ತಾದಲ್ಲಿರುವ ವಿದೇಶಿಯರ ಪ್ರತಿಮೆಗಳನ್ನು ತೆಗೆದುಹಾಕಲಾಗುವುದು

Photo: Twitter@NDTV
ಕೋಲ್ಕತ್ತಾ: 'ಇಂಡಿಯಾ'ವನ್ನು 'ಭಾರತ' ಎಂದು ಮರುನಾಮಕರಣ ಮಾಡಲಾಗುವುದು ಹಾಗೂ ಕೋಲ್ಕತ್ತಾದಲ್ಲಿರುವ ವಿದೇಶಿಯರ ಪ್ರತಿಮೆಗಳನ್ನು ತೆಗೆದುಹಾಕಲಾಗುವುದು ಎಂದು ಪಶ್ಚಿಮ ಬಂಗಾಳದ ಹಿರಿಯ ಬಿಜೆಪಿ ನಾಯಕ ದಿಲೀಪ್ ಘೋಷ್ ರವಿವಾರ ಹೇಳಿದ್ದಾರೆ.
ಹೆಸರು ಬದಲಾವಣೆಯನ್ನು ವಿರೋಧಿಸುವವರು ದೇಶ ತೊರೆಯಬಹುದು ಎಂದು ಮೇದಿನಿಪುರ ಸಂಸದ ಹೇಳಿದ್ದಾರೆ.
ತಮ್ಮ ಕ್ಷೇತ್ರಕ್ಕೆ ಒಳಪಡುವ ಖರಗ್ ಪುರ ನಗರದಲ್ಲಿ ನಡೆದ ''ಚಾಯ್ ಪೆ ಚರ್ಚಾ'' ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಘೋಷ್ ," 'ಪಶ್ಚಿಮ ಬಂಗಾಳದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಾಗ, ನಾವು ಕೋಲ್ಕತ್ತಾದಲ್ಲಿ ವಿದೇಶಿಯರ ಎಲ್ಲಾ ಪ್ರತಿಮೆಗಳನ್ನು ತೆಗೆದುಹಾಕುತ್ತೇವೆ'. 'ಇಂಡಿಯಾ'ವನ್ನು 'ಭಾರತ್ ಎಂದು ಮರುನಾಮಕರಣ ಮಾಡಲಾಗುವುದು, ಅದನ್ನು ಇಷ್ಟಪಡದವರು ದೇಶವನ್ನು ತೊರೆಯಲು ಸ್ವತಂತ್ರರು'' ಎಂದು ಹೇಳಿದರು.
ರಾಜ್ಯದ ಮತ್ತೊಬ್ಬ ಹಿರಿಯ ಬಿಜೆಪಿ ನಾಯಕ ರಾಹುಲ್ ಸಿನ್ಹಾ, "ಒಂದು ದೇಶಕ್ಕೆ ಎರಡು ಹೆಸರುಗಳು ಇರಬಾರದು.ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವ ನಾಯಕರು ಹೊಸದಿಲ್ಲಿಯಲ್ಲಿ ಉಪಸ್ಥಿತರಿರುವುದರಿಂದ ಹೆಸರನ್ನು ಬದಲಾಯಿಸಲು ಇದು ಸರಿಯಾದ ಸಮಯ'' ಎಂದು ಹೇಳಿದರು.
"ಪ್ರತಿಪಕ್ಷ INDIA ಮೈತ್ರಿಗೆ ಬೆದರಿ ಬಿಜೆಪಿ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ" ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಸಂತಾನು ಸೇನ್ ಆರೋಪಿಸಿದ್ದಾರೆ.