ಆಂಧ್ರ ಪ್ರದೇಶದ ಅರಣ್ಯದಲ್ಲಿ ಆನೆಗಳ ದಾಳಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದ ಮೂವರು ಭಕ್ತರು ಮೃತ್ಯು

ಸಾಂದರ್ಭಿಕ ಚಿತ್ರ (PTI)
ಅಮರಾವತಿ : ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಓಬುಲವಾರಿಪಲ್ಲಿ ಬಳಿಯ ಅರಣ್ಯದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಆನೆಗಳ ಗುಂಪು ದಾಳಿ ನಡೆಸಿದ್ದು, ಈ ವೇಳೆ ಮೂವರು ಭಕ್ತರು ಮೃತಪಟ್ಟಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ತಲಕೋಣ ದೇವಸ್ಥಾನಕ್ಕೆ ತೆರಳುತ್ತಿದ್ದ 30 ಜನರಿದ್ದ ಭಕ್ತರ ಗುಂಪು ಅರಣ್ಯದಲ್ಲಿ ಸಾಗುತ್ತಿದ್ದಾಗ ಮಂಗಳವಾರ ಬೆಳಗಿನ ಜಾವ 2.30ರ ಸುಮಾರಿಗೆ ಭಕ್ತರ ಮೇಲೆ ಆನೆಗಳು ದಾಳಿ ನಡೆಸಿದೆ. ಈ ವೇಳೆ ಮೂವರು ಭಕ್ತರು ಮೃತಪಟ್ಟಿದ್ದಾರೆ ಮತ್ತು ಓರ್ವರಿಗೆ ಗಂಭೀರವಾದ ಗಾಯಗಳಾಗಿದೆ, ಮತ್ತಿಬ್ಬರು ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಈ ಅರಣ್ಯವು ಓಬುಲವಾರಿಪಲ್ಲಿ ಮಂಡಲದ ವೈ ಕೋಟಾ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಭಕ್ತರ ಮೇಲೆ ದಾಳಿ ಮಾಡಿದ ಆನೆಗಳ ಹಿಂಡಿನಲ್ಲಿ 15 ಆನೆಗಳು ಇದ್ದವು ಎಂದು ತಿಳಿದು ಬಂದಿದೆ. ಅರಣ್ಯದಲ್ಲಿ ಪರಿಶೀಲನೆ ನಡೆಸಿದಾಗ ಮೂವರು ಭಕ್ತರ ಮೃತದೇಹಗಳು ಸಿಕ್ಕಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೃತ ಭಕ್ತರ ಕುಟುಂಬಕ್ಕೆ ಪರಿಹಾರ ಘೋಷಣೆ :
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದರು. ಅರಣ್ಯ ಪ್ರದೇಶಗಳಲ್ಲಿನ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರ ಭದ್ರತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದಲ್ಲದೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಮತ್ತು ಗಾಯಗೊಂಡವರಿಗೆ ತಲಾ 5 ಲಕ್ಷ ರೂ.ಧನಸಹಾಯವನ್ನು ಘೋಷಿಸಿದ್ದಾರೆ.