ಹರ್ಯಾಣ ಪೊಲೀಸರು ಹಾರಿಸಿದ ಪೆಲೆಟ್ ಗುಂಡುಗಳಿಂದ ಮೂವರು ರೈತರ ದೃಷ್ಟಿ ನಾಶ ; ಪಂಜಾಬ್ ಆರೋಗ್ಯ ಸಚಿವ ಡಾ. ಬಲ್ಬೀರ್ ಸಿಂಗ್
Photo: PTI
ಹೊಸದಿಲ್ಲಿ : ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ ಸಂದರ್ಭ ಹರ್ಯಾಣ ಪೊಲೀಸರು ಹಾರಿಸಿದ ಪೆಲೆಟ್ ಗುಂಡುಗಳಿಂದ ಕನಿಷ್ಠ ಮೂವರು ರೈತರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಪಂಜಾಬಿನ ಆರೋಗ್ಯ ಸಚಿವ ಡಾ. ಬಲ್ಬೀರ್ ಸಿಂಗ್ ತಿಳಿಸಿದ್ದಾರೆ.
ತಮ್ಮ 21 ಅಂಶಗಳ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರವನ್ನು ಆಗ್ರಹಿಸಿ ದಿಲ್ಲಿಯತ್ತ ರ್ಯಾಲಿ ನಡೆಸಲು ಪ್ರಯತ್ನಿಸಿದ ಸಂದರ್ಭ ಶಂಭು ಗಡಿಯಲ್ಲಿ ಸಾವಿರಾರು ರೈತರನ್ನು ಪಂಜಾಬ್ ಪೊಲೀಸರು ತಡೆದಿದ್ದಾರೆ. ರೈತರ ಬೇಡಿಕೆಗಳು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಹಾಗೂ ಭಾರತದಲ್ಲಿ ಕೃಷಿ ಕುರಿತು ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯ ಹಲವು ಶಿಫಾರಸುಗಳ ಅನುಷ್ಠಾನವನ್ನು ಒಳಗೊಂಡಿದೆ.
‘‘ಪೊಲೀಸರು ಹಾರಿಸಿದ ಪೆಲೆಟ್ ಗುಂಡಿಗೆ ಕನಿಷ್ಠ ಮೂವರು ರೈತರು ದೃಷ್ಟಿ ಕಳೆದುಕೊಂಡಿದ್ದಾರೆ. ಇವರಲ್ಲಿ ಒಬ್ಬರು ಚಂಡಿಗಢದ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸೆಕ್ಟರ್ 32ರಲ್ಲಿ ದಾಖಲಾಗಿದ್ದಾರೆ. ಇಬ್ಬರು ಪಟಿಯಾಲದ ರಾಜೇಂದ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ’’ ಎಂದು ಡಾ. ಬಲ್ಬೀರ್ ಸಿಂಗ್ ತಿಳಿಸಿದ್ದಾರೆ.
‘‘ನಾವು ಅವರ ಪರಿಶೀಲನೆ ನಡೆಸಿದೆವು. ಆದರೆ, ಅವರ ಕಣ್ಣುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹರ್ಯಾಣ ಪೊಲೀಸರು ಜಲ ಫಿರಂಗಿ ಹಾಗೂ ಅಶ್ರುವಾಯು ಸೆಲ್ ಗಳನ್ನು ಮಾತ್ರ ಬಳಸಿಲ್ಲ, ಬುಲೆಟ್ ಹಾಗೂ ಪೆಲೆಟ್ ಗನ್ ಗಳನ್ನು ಕೂಡ ಬಳಸಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಆದರೆ, ಹರ್ಯಾಣದ ಹೆಚ್ಚುವರಿ ಡಿಜಿಪಿ ಮಮತಾ ಸಿಂಗ್, ‘‘2 ಸಾವಿರದಿಂದ 3 ಸಾವಿರ ಜನರಿದ್ದ ಗುಂಪು ನಮ್ಮ ಪಡೆಯನ್ನು ಸುತ್ತುವರಿದ ಒಂದೆರೆಡು ಸಂದರ್ಭ ಅಶ್ರುವಾಯು ಸೆಲ್ ಗಳನ್ನಲ್ಲದೆ, ರಬ್ಬರ್ ಗುಂಡುಗಳನ್ನು ಬಳಸಿದ್ದೇವೆ’’ ಎಂದಿದ್ದಾರೆ.
‘‘ರಬ್ಬರ್ ಗುಂಡುಗಳನ್ನು ಮಾರಕವಲ್ಲದ ಮದ್ದುಗುಂಡು ಎಂದು ಪರಿಗಣಿಸಲಾಗಿದೆ. ಅವರು ತುಂಬಾ ಹತ್ತಿರ ಬಂದಾಗ ಹಾಗೂ ನಮ್ಮ ಪಡೆಗಳ ಮೇಲೆ ದಾಳಿ ನಡೆಸಿದಾಗ ಮಾತ್ರ ನಾವು ರಬ್ಬರ್ ಗುಂಡುಗಳನ್ನು ಬಳಸಿದ್ದೇವೆ’’ ಎಂದು ಅವರು ಹೇಳಿದ್ದಾರೆ.
ಹರ್ಯಾಣ ಪೊಲೀಸರು ಹಾಗೂ ಅರೆ ಸೇನಾ ಪಡೆಗಳು ಪ್ರತಿಭಟನಕಾರರ ವಿರುದ್ಧ ಅತಿಯಾದ ಬಲವನ್ನು ಹೇಗೆ ಬಳಸುತ್ತಿವೆ ಎಂಬುದನ್ನು ಕಿಸಾನ್ ಮಜ್ದೂರ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸಂಚಾಲಕ ಸರವಣ್ ಸಿಂಗ್ ಪಂಧೇರ್ ಅವರು ಗುರುವಾರ ಪಟ್ಟಿ ಮಾಡಿದ್ದಾರೆ.
ಅರೆ ಸೇನಾ ಪಡೆಗಳು ಅವಧಿ ಮೀರಿದ ಹಾಗೂ ಖಾಸಗಿ ಕಂಪೆನಿ ಉತ್ಪಾದಿಸಿದ ಮದ್ದುಗುಂಡುಗಳನ್ನು ಪ್ರತಿಭಟನಕಾರರ ವಿರುದ್ಧ ಬಳಸುತ್ತಿವೆ. ಆದುದರಿಂದ ಇದು ಸರಕಾರದ ದಾಖಲೆಯಲ್ಲಿ ಪ್ರತಿಫಲಿಸುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ ಎಂದು ‘ದಿ ಟ್ರಿಬ್ಯೂನಲ್’ ವರದಿ ಮಾಡಿದೆ.