ಬಡ, ದಲಿತ ಹಾಗೂ ಆದಿವಾಸಿ ಜನರನ್ನು ದಮನಿಸುವ ವ್ಯವಸ್ಥೆಯ ವಿರುದ್ಧ ಸಿಡಿದು ನಿಲ್ಲಬೇಕಾದ ಕಾಲ ಬಂದಿದೆ: ಹೇಮಂತ್ ಸೊರೇನ್
ಹೇಮಂತ್ ಸೊರೆನ್ (PTI)
ರಾಂಚಿ: ಬಡ, ದಲಿತ ಹಾಗೂ ಆದಿವಾಸಿಗಳನ್ನು ದಮನಿಸುವ ಭೂಮಾಲೀಕ ವ್ಯವಸ್ಥೆಯ ವಿರುದ್ಧ ಸಿಡಿದೇಳಬೇಕಾದ ಕಾಲ ಬಂದಿದೆ ಎಂದು ಜೆಎಂಎಂ ಕಾರ್ಯಾಧ್ಯಕ್ಷ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕರೆ ನೀಡಿದ್ದಾರೆ.
“ನಾನು ತಲೆ ಬಾಗುವುದಿಲ್ಲ. ಅಂತಿಮಬಾಗಿ ಸತ್ಯಕ್ಕೆ ಗೆಲುವಾಗಲಿದೆ” ಎಂದು ತಮ್ಮ ಬಂಧನಕ್ಕೂ ಕೆಲವೇ ನಿಮಿಷಗಳ ಮುನ್ನ ನೀಡಿರುವ ವಿಡಿಯೊ ಸಂದೇಶದಲ್ಲಿ ಸೊರೆನ್ ಹೇಳಿದ್ದಾರೆ.
ನನ್ನನ್ನು ಬಂಧಿಸಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದೊಂದಿಗೆ ನನಗೆ ಯಾವುದೇ ಸಂಪರ್ಕವಿಲ್ಲ ಎಂದೂ ಸೊರೆನ್ ಸ್ಪಷ್ಟನೆ ನೀಡಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬೆನ್ನಿಗೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೆಎಂಎಂ ನಾಯಕರಾದ ಹೇಮಂತ್ ಸೊರೆನ್ ಅವರನ್ನು ಬುಧವಾರ ರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಸಾರಿಗೆ ಸಚಿವ ಚಂಪೈ ಸೊರೆನ್ ಅವರನ್ನು ಅವರ ಉತ್ತರಾಧಿಕಾರಿಯನ್ನಾಗಿ ಹೆಸರಿಸಲಾಗಿದೆ.
ಹೇಮಂತ್ ಸೊರೆನ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಏಳು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ ಜಾರಿ ನಿರ್ದೇಶನಾಲಯವು, ನಂತರ ಅವರನ್ನು ಬಂಧಿಸಿತು.