ಬಿಜೆಪಿ ಸೇರ್ಪಡೆ ವದಂತಿಯ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರನ್ನು ಭೇಟಿಯಾದ ‘ತಿಪ್ರಾ ಮೊಹ್ತಾ’ ಮುಖಂಡ
Photo: FB.com/ PradyotBikramManikya
ಅಗರ್ತಲ: ತ್ರಿಪುರಾದ ಪ್ರಮುಖ ವಿರೋಧ ಪಕ್ಷವಾದ ತಿಪ್ರಾ ಮೊಹ್ತಾದ ಮುಖಂಡ ಹಾಗೂ ರಾಜವಂಶಕ್ಕೆ ಸೇರಿದ ಪ್ರದ್ಯೋತ್ ಕಿಶೋರ್ ದೆಬ್ಬರ್ ಮನ್ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂದು ಬಿಜೆಪಿ ಘೋಷಿಸಿದ ಬೆನ್ನಲ್ಲೇ, ಪ್ರದ್ಯೋತ್ ಅವರು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಪಿಸಿಸಿ ಅಧ್ಯಕ್ಷ ಆಶೀಶ್ ಕುಮಾರ್ ಸಹಾ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಸುದೀಪ್ ರಾಯ್ ಬರ್ಮನ್ ಅವರನ್ನು ಭೇಟಿ ಮಾಡಿ ಪ್ರದ್ಯೋತ್ ಚರ್ಚೆ ನಡೆಸಿದರು. "ಬಿಜೆಪಿ ವಿರೋಧಿ ರಂಗ ದೇಶಾದ್ಯಂತ ಬೆಳೆಯುತ್ತಿದ್ದು, ತ್ರಿಪುರಾ ಕೂಡಾ ಇದಕ್ಕೆ ಹೊರತಾಗಿಲ್ಲ" ಎಂದು ಸಹಾ ಹೇಳಿದ್ದಾರೆ.
ತ್ರಿಪುರಾ ಸಮಸ್ಯೆಗೆ ಸಾಂವಿಧಾನಿಕ ಪರಿಹಾರ ಒದಗಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ಆಮರಣಾಂತ ಉಪವಾಸ ಆರಂಭಿಸುವುದಾಗಿ ಪಕ್ಷದ ಮುಖಂಡರ ಜತೆ ಚರ್ಚಿಸಿದ ಪ್ರದ್ಯೋತ್ ಘೋಷಿಸಿದ್ದಾರೆ.
"ದೆಹಲಿಯಲ್ಲಿ ಕುಳಿತ ಜನ, ತ್ರಿಪುರಾ ಸಣ್ಣ ರಾಜ್ಯ ಎಂಬ ಕಾರಣಕ್ಕೆ ನಮ್ಮನ್ನು ದೂರ ಇಡಲು ಪ್ರಯತ್ನಿಸುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ ಯಾವ ಭಾರತೀಯ ಕೂಡಾ ದೊಡ್ಡ ಅಥವಾ ಸಣ್ಣ ಅಲ್ಲ. ಎಲ್ಲರೂ ಸಮಾನರು. ಸ್ವಾಯತ್ತ ಜಿಲ್ಲಾ ಮಂಡಳಿ (ಎಡಿಸಿ)ಯ ಪ್ರದೇಶದಲ್ಲಿ ವಾಸಿಸುವವರಿಗೂ ಅದೇ ಸಮಾನ ಸ್ಥಾನಮಾನ ನೀಡಬೇಕು" ಎಂದು ಪ್ರದ್ಯೋತ್ ಹೇಳಿದ್ದಾರೆ.
ತನ್ನ ಭವಿಷ್ಯದ ನೀತಿಗಳ ವಿಚಾರದಲ್ಲಿ ತಿಪ್ರಾ ಮೊಹ್ತಾದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗಿದೆ. ಪಕ್ಷದ ಕೆಲ ಶಾಸಕರು ಬಿಜೆಪಿ ಜತೆ ಕೈಜೋಡಿಸುವ ಬಗ್ಗೆ ಒಲವು ಹೊಂದಿದ್ದು, ಒಂದು ಬಣ ಸ್ವತಂತ್ರವಾಗಿ ಸ್ಪರ್ಧಿಸುವ ಅಥವಾ ಲೋಕಸಭಾ ಚುನವಣೆಯಲ್ಲಿ ಬಿಜೆಪಿ ವಿರೋಧಿ ರಂಗವನ್ನು ಸೇರುವ ಇರಾದೆ ಹೊಂದಿದೆ.