ತಿರುಪತಿ | ವೈಕುಂಠ ಏಕಾದಶಿ ದರ್ಶನ ಟಿಕೆಟ್ ಪಡೆಯಲು ನೂಕುನುಗ್ಗಲು ; ಕಾಲ್ತುಳಿತಕ್ಕೆ ಕನಿಷ್ಠ ನಾಲ್ವರು ಬಲಿ
PC : PTI
ತಿರುಪತಿ: ವೈಕುಂಠ ಏಕಾದಶಿ ದರ್ಶನದ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿದ್ದರಿಂದ ಕಾಲ್ತುಳಿತ ಸಂಭವಿಸಿ ಕನಿಷ್ಠ ನಾಲ್ವರು ಬಲಿಯಾದ ಘಟನೆ ಬುಧವಾರ ರಾತ್ರಿ ತಿರುಪರಿ ತಿರುಮಲ ದೇವಸ್ಥಾನ ವ್ಯಾಪ್ತಿಯಲ್ಲಿ ನಡೆದಿದೆ.
ಒಬ್ಬರು ಸರ್ವದರ್ಶನ ಟೋಕನ್ ಕೇಂದ್ರದಲ್ಲಿ ಮೃತಪಟ್ಟರೆ, ಉಳಿದ ಮೂವರು ರಾಮನಾಯ್ಡು ಶಾಲೆಯ ಆವರಣದಲ್ಲಿ ಡೆದ ನೂಕುನುಗ್ಗಲಿನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಭಕ್ತರನ್ನು ಸರತಿ ಸಾಲಿನಲ್ಲಿ ಬಿಡುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ತಿರುಪತಿಯ ಸರ್ವದರ್ಶನ ಟೋಕನ್ ನೀಡುವ ಕೇಂದ್ರಗಳಲ್ಲಿ ಮೂರು ಕಡೆ ಭಕ್ತರ ನಡುವೆ ಮಾರಾಮಾರಿ ನಡೆದಿದೆ. ಶ್ರೀನಿವಾಸಂ ಕೌಂಟರ್ನಲ್ಲಿ ಸರದಿ ಸಾಲಿನಲ್ಲಿ ಉಂಟಾದ ಕಾಲ್ತುಳಿತದಲ್ಲಿ ತಮಿಳುನಾಡಿನ ಸೇಲಂ ಮೂಲದ ಮಹಿಳಾ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ. ಟೋಕನ್ ನೀಡುವ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ಬರುವಾಗ ಭಕ್ತರು ಪರಸ್ಪರ ತಳ್ಳಿಕೊಂಡಿದ್ದರಿಂದ ನೂಕುನುಗ್ಗಲು ಉಂಟಾಯಿತು ಎನ್ನಲಾಗಿದೆ.