ತಿರುಪತಿ ಲಡ್ಡು ವಿವಾದ: ಪ್ರಾಣಿಜನ್ಯ ಕೊಬ್ಬು ಮಿಶ್ರಿತ ತುಪ್ಪ ಪೂರೈಸುವವರು ಯಾರು ಗೊತ್ತೇ?
Photo : fb/tirupathiTirumalaVaibhavam
ತಿರುಪತಿ: ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕೊಬ್ಬಿನ ಅಂಶ ಸೇರಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಆಪಾದಿಸಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ವಿವಾದ ಇದೀಗ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದೆ. ನಾಯ್ಡು ಆರೋಪವನ್ನು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಬೆಂಬಲಿಸಿದ್ದರೆ, ವೈಎಸ್ಆರ್ಸಿಪಿ ಮುಖಂಡ ವೈ.ಎಸ್.ಜಗನ್ ಮೋಹನ ರೆಡ್ಡಿ ಇದನ್ನು ದುರುದ್ದೇಶದ ಆರೋಪ ಎಂದು ಬಣ್ಣಿಸಿದ್ದಾರೆ.
ಕೇಂದ್ರ ಸರ್ಕಾರ ವಿವಾದದಲ್ಲಿ ಮಧ್ಯಪ್ರವೇಶಿಸಿದ್ದು, ಅಂಧ್ರ ಸರ್ಕಾರದಿಂದ ವರದಿ ತರಿಸಿಕೊಳ್ಳುವುದಾಗಿ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. ಆಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ಈ ಆರೋಪಗಳ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಡ್ಡು ಪ್ರಸಾದದಲ್ಲಿ ಹಂದಿ ಕೊಬ್ಬು ಇರುವುದನ್ನು ಪ್ರಯೋಗಾಲಯ ವರದಿ ದೃಢಪಡಿಸಿದ್ದು, ಈ ಹಿನ್ನೆಲೆಯಲ್ಲಿ ಕಲುಷಿತ ತುಪ್ಪ ಪೂರೈಕೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಲಡ್ಡಿನಲ್ಲಿ ಬಳಸುವ ವಸ್ತುಗಳ ಪ್ರಮಾಣೀಕರಣಕ್ಕೆ ತನ್ನದೇ ಸ್ವಂತ ಪ್ರಯೋಗಾಲಯ ಇಲ್ಲದಿರುವುದು ಲೋಪ ಎಂದು ಅವರು ವಿಶ್ಲೇಷಿಸಿದ್ದಾರೆ. ಇದರ ದುರ್ಲಾಭ ಪಡೆದು ಪ್ರತಿ ಕೆ.ಜಿ. ತುಪ್ಪವನ್ನು 320 ರೂಪಾಯಿ ಹಾಗೂ 411 ರೂಪಾಯಿ ದರದಲ್ಲಿ ಪೂರೈಸಿದ್ದಾರೆ. ಶುದ್ಧ ಹಸುವಿನ ತುಪ್ಪವನ್ನು ಈ ದರದಲ್ಲಿ ಪೂರೈಸಲಾಗದು ಎನ್ನುವುದು ಅವರ ಸಮರ್ಥನೆ.
ಎಚ್ಚರಿಕೆಯ ಬಳಿಕವೂ ಎಆರ್ ಫುಡ್ಸ್ ಕಳುಹಿಸಿದ ನಾಲ್ಕು ತುಪ್ಪದ ಟ್ಯಾಂಕರ್ ಗಳು ಮೇಲ್ನೋಟಕ್ಕೆ ಕಳಪೆ ಗುಣಮಟ್ಟದ್ದು ಎಂದು ಕಂಡುಬಂದಿವೆ. ಇದರ ಮಾದರಿಯನ್ನು ಪ್ರತಿಷ್ಠಿತ ಎನ್ ಡಿಡಿಬಿ ಸಿಎಎಲ್ಎಫ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರಲ್ಲಿ ಸೋಯಾಬೀನ್, ಸೂರ್ಯಕಾಂತಿ, ತಾಳೆಎಣ್ಣೆ ಮತ್ತು ಹಂದಿ ಹಾಗೂ ದನದ ಕೊಬ್ಬು ಕೂಡಾ ಸೇರಿದೆ ಎನ್ನುವುದನ್ನು ಪ್ರಯೋಗಾಲಯ ವರದಿ ಹೇಳಿದ್ದಾಗಿ ರಾವ್ ವಿವರಿಸಿದ್ದಾರೆ.
ಆದರೆ ಅಧಿಕಾರಿಗಳು ಈ ತುಪ್ಪದ ಗುಣಮಟ್ಟವನ್ನು ಪ್ರಮಾಣೀಕರಿಸಿದ್ದಾರೆ ಎಂದು ತುಪ್ಪ ಪೂರೈಕೆ ಮಾಡಿದ ಎಆರ್ ಡೈರಿ ಸ್ಪಷ್ಟಪಡಿಸಿದೆ. ಕೇವಲ ಜೂನ್ ಮತ್ತು ಜುಲೈ ತಿಂಗಳಲ್ಲಿ ತಾನು ತುಪ್ಪ ಪೂರೈಸಿದ್ದು, ಪ್ರಮಾಣಿತ ಪ್ರಯೋಗಾಲಯ ವರದಿಯ ಜತೆಗೇ ಪೂರೈಸಲಾಗಿದೆ ಎಂದು ಹೇಳಿದೆ.