ಪ್ರಶ್ನೆಗಾಗಿ ನಗದು ಪ್ರಕರಣ: ಮಹುವಾ ಮೊಯಿತ್ರಾ ಸಂಸತ್ತಿನಿಂದ ಉಚ್ಚಾಟನೆ
ಸಂಸದೆಗೆ ಮಾತನಾಡಲು ಅವಕಾಶ ನೀಡದ ಸ್ಪೀಕರ್
ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ: ವ್ಯಾಪಕ ಕುತೂಹಲಕ್ಕೆ ಕಾರಣವಾಗಿದ್ದ ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದ ನೈತಿಕ ಸಮಿತಿಯ ಶಿಫಾರಸಿನ ಮೇರೆಗೆ ಇಂದು ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ಮಹುವಾ ಅವರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಅಂಶಗಳನ್ನು ಹೊಂದಿದ್ದ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲಾಗಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ರೂ 2 ಕೋಟಿ ನಗದು ಮತ್ತು ಇತರ ದುಬಾರಿ ಉಡುಗೊರೆಗಳನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ.
ತಮ್ಮ ಲೋಕಸಭೆಯ ಲಾಗಿನ್ ಮಾಹಿತಿಯನ್ನೂ ಅವರು ಹಿರಾನಂದಾನಿಗೆ ನೀಡಿ ಅವರು ನೇರವಾಗಿ ಮಹುವಾ ಪರ ಪ್ರಶ್ನೆಗಳನ್ನು ಪೋಸ್ಟ್ ಮಾಡಲು ಅನುಮತಿಸಿದ್ದರೆಂಬ ಆರೋಪವನ್ನೂ ಮಹುವಾ ಎದುರಿಸುತ್ತಿದ್ದಾರೆ. ಪ್ರಧಾನಿಯ ಕಟು ಟೀಕಾಕಾರರಾಗಿರುವ ಮಹುವಾ ಅವರು ಲಂಚ ಆರೋಪ ನಿರಾಕರಿಸಿದ್ದರೂ ಲಾಗಿನ್ ವಿವರಗಳನ್ನು ಹಂಚಿಕೊಂಡಿದ್ದನ್ನು ಒಪ್ಪಿಕೊಂಡಿದ್ದಾರೆ.
ನೈತಿಕ ಸಮಿತಿಯ ಸುಮಾರು 500 ಪುಟಗಳ ವರದಿ ಸದನದ ಮುಂದೆ ಪ್ರಸ್ತುತವಾಗುತ್ತಿದ್ದಂತೆಯೇ ಆಡಳಿತ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ವಾಕ್ಸಮರವೇ ನಡೆದು ಹೋಯಿತು. ಸಮಿತಿಯ ವರದಿಯನ್ನು ಅಧ್ಯಯನ ನಡೆಸಲು ಸಮಯ ಬೇಕಿದೆ ಎಂದು ವಿಪಕ್ಷ ಸಂಸದರು ಹೇಳಿದರಲ್ಲದೆ ತಮ್ಮ ವಿರುದ್ಧದ ಆರೋಪಗಳ ಕುರಿತಂತೆ ಮಹುವಾ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಬೇಕೆಂದೂ ಬೇಡಿಕೆ ಇಟ್ಟರು.
ಆದರೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಹುವಾ ಅವರಿಗೆ ಮಾತನಾಡಲು ಅವಕಾಶ ನೀಡಲು ಒಪ್ಪಲಿಲ್ಲ. ಇಂತಹುದೇ ವಿವಾದದಲ್ಲಿ 2005ರಲ್ಲಿ ಬಿಜೆಪಿಯ ಆರು ಮಂದಿ ಸಹಿತ 10 ಸಂಸದರು ಅಮಾನತುಗೊಂಡ ವಿದ್ಯಮಾನವನ್ನು ಅವರು ಉಲ್ಲೇಖಿಸಿ ಸದನದಲ್ಲಿ ವರದಿ ಮಂಡನೆಯಾದ ನಂತರ ಈ ಸಂಸದರು ಸದನದಲ್ಲಿ ಮಾತನಾಡುವ ಹಕ್ಕು ಕಳೆದುಕೊಂಡಿದ್ದಾರೆಂದು ಆಗಿನ ಸ್ಪೀಕರ್ ಸೋಮನಾಥ್ ಚಟರ್ಜಿ ಹೇಳಿದ್ದನ್ನು ನೆನಪಿಸಿದರು.
ಅಕ್ರಮವಾಗಿ ಉಡುಗೊರೆಗಳನ್ನು ಸ್ವೀಕರಿಸಿದ ಕುರಿತಂತೆ ಮಹುವಾ ವಿರುದ್ಧದ ಆರೋಪಗಳು ಸಾಬೀತಾಗಿವೆ ಮತ್ತು ನಿರಾಕರಿಸಲಾಗದು ಎಂದು ವರದಿ ಹೇಳಿದೆ. ಉದ್ಯಮಿಯೊಬ್ಬರಿಂದ ಉಡುಗೊರೆ ಪಡೆದಿದ್ದೇ ಅಲ್ಲದೆ ಲಾಗಿನ್ ವಿವರಗಳನ್ನೂ ನೀಡಿದ್ದು ಸಂಸದೆಯಾಗಿ ಮಾಡುವ ಕೆಲಸವಲ್ಲ ಮತ್ತು ಅನೈತಿಕ ವರ್ತನೆ ಎಂದು ವರದಿ ಹೇಳಿದೆ.