ತಮಿಳುನಾಡು ರಾಜ್ಯಪಾಲರು ಸುಪ್ರೀಂ ಕೋರ್ಟ್ ಅನ್ನು ಧಿಕ್ಕರಿಸುತ್ತಿದ್ದಾರೆ, ಅವರ ನಡವಳಿಕೆಯ ಬಗ್ಗೆ ಗಂಭೀರವಾಗಿ ಕಳವಳಗೊಂಡಿದ್ದೇವೆ : ಸುಪ್ರೀಂ ಕೋರ್ಟ್
Photo : @rajbhavan_tn
ಹೊಸದಿಲ್ಲಿ: ಮಾಜಿ ಸಚಿವ ಕೆ.ಪೊನ್ಮುಡಿ ಅವರ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ್ದರೂ, ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ನಿರಾಕರಿಸಿರುವುದರ ಕುರಿತು ಗುರುವಾರ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, “ಮಾನ್ಯ ಅಟಾರ್ನಿ ಜನರಲ್ ಅವರೆ, ನಿಮ್ಮ ರಾಜ್ಯಪಾಲರು ಏನು ಮಾಡುತ್ತಿದ್ದಾರೆ? ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದೆ ಹಾಗೂ ರಾಜ್ಯಪಾಲರು ನಾನು ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸುವುದಿಲ್ಲ ಎಂದು ಹೇಳುತ್ತಿದ್ದಾರೆ! ನಾವು ಕೆಲವು ಗಂಭೀರ ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ. ನಾವು ಈ ಕುರಿತು ಗಂಭೀರವಾಗಿ ಪರಿಗಣಿಸಲಿದ್ದೇವೆ ಎಂದು ದಯವಿಟ್ಟು ನಿಮ್ಮ ರಾಜ್ಯಪಾಲರಿಗೆ ತಿಳಿಸಿ” ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ಖಾರವಾಗಿ ಸೂಚಿಸಿದರು.
“ರಾಜ್ಯಪಾಲರು ಹೀಗೆ ಹೇಳಲು ಹೇಗೆ ಸಾಧ್ಯ? ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆ ನೀಡಿದ ನಂತರ, ಅವರನ್ನು ಸಚಿವರನ್ನಾಗಿ ಮರು ಸೇರ್ಪಡೆ ಮಾಡಿಕೊಳ್ಳುವುದು ಹೇಗೆ ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗುತ್ತದೆ?” ಎಂದು ಅವರು ಕಿಡಿ ಕಾರಿದರು.
ಪೊನ್ಮುಡಿಯವರನ್ನು ಸಚಿವರನ್ನಾಗಿ ಮರು ನೇಮಕ ಮಾಡಿಕೊಳ್ಳುವ ಮುಖ್ಯಮಂತ್ರಿಗಳ ಶಿಫಾರಸಿಗೆ ಸಮ್ಮತಿ ನೀಡಬೇಕು ಎಂದು ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸರಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ಆಲಿಸುತ್ತಿದೆ