ಅಮೆರಿಕದ ರಫ್ತು ಹೆಚ್ಚಳಕ್ಕೆ ಭಾರತದ ಜೊತೆ ವ್ಯಾಪಾರ ಒಪ್ಪಂದ ಅನಿವಾರ್ಯ

PC: x.com/MarioNawfal
ಹೊಸದಿಲ್ಲಿ: ಅಮೆರಿಕದ ಜತೆಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಭಾರತಕ್ಕೆ ಪ್ರಮುಖವಾಗಿರುವುದು ಮಾತ್ರವಲ್ಲದೇ ಅಮೆರಿಕದ ಉತ್ಪಾದನೆ ಹೆಚ್ಚಳ ಹಾಗೂ ರಫ್ತು ಹೆಚ್ಚಿಸುವ ಟ್ರಂಪ್ ಅವರ ಮಹತ್ವಾಕಾಂಕ್ಷಿ ಯೋಜನೆಗೂ ಇದು ಅನಿವಾರ್ಯ ಎನಿಸಿದೆ.
ಎಲ್ಲ ಸರಕುಗಳ ಮೇಲೆ ಸುಂಕ ಇಳಿಕೆಯಿಂದ ಕಾರು ಉತ್ಪಾದಕರು ಅಥವಾ ಹ್ಯಾಂಡ್ ಸೆಟ್ ಉತ್ಪಾದಕರು ಅಮೆರಿಕದ ಬದಲಾಗಿ ಅತ್ಯಂತ ಸ್ಪರ್ಧಾತ್ಮಕ ಮೂಲಗಳಿಂದ ಅಂದರೆ ಚೀನಾ, ಆಗ್ನೇಯ ಏಷ್ಯಾ ದೇಶಗಳಿಂದ ಭಾರತಕ್ಕೆ ಸರಕು ರಫ್ತು ಮಾಡುವ ಸಾಧ್ಯತೆ ಅಧಿಕವಾಗಿದೆ.
ಅಮೆರಿಕದ ಎಲ್ಲ ಅಧ್ಯಕ್ಷರ ಅತ್ಯಂತ ಪ್ರೀತಿಪಾತ್ರವಾದ ಹಾರ್ಲೆ ಡೇವಿಡ್ ಸನ್ ಅಥವಾ ಟ್ರಂಪ್ ನಿಕಟವರ್ತಿ ಎಲಾನ್ ಮಸ್ಕ್ ಅಮೆರಿಕದಿಂದ ತಮ್ಮ ವಾಹನಗಳನ್ನು ರಫ್ತು ಮಾಡುವ ಸಾಧ್ಯತೆ ಇಲ್ಲ. ಹಾರ್ಲೆ ತನ್ನ ಬೈಕ್ ಗಳನ್ನು ತನ್ನ ಥಾಯ್ಲೆಂಡ್ ನಲ್ಲಿರುವ ಉತ್ಪಾದನಾ ವ್ಯವಸ್ಥೆಯಿಂದ ಆಮದು ಮಾಡಿಕೊಂಡರೆ, ಭಾರತದಲ್ಲಿ ತನ್ನ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿರುವ ಟೆಸ್ಲಾ, ಚೀನಾದಿಂದ ವಾಹನಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತನ್ನ ಎಲೆಕ್ಟ್ರಿಕ್ ಸರಕುಗಳನ್ನು ಜರ್ಮನಿಂದ ರಫ್ತು ಮಾಡುವ ಸಾಧ್ಯತೆ ಇದೆ.
ಕಂಪನಿಗಳು ಅಮೆರಿಕದ ಬದಲಾಗಿ ಇತರ ಉತ್ಪಾದನಾ ನೆಲೆಗಳನ್ನು ಹೆಚ್ಚು ಲಾಭದಾಯಕ ಎಂದು ಕಂಡುಕೊಂಡಿವೆ. ಇದರ ಜತೆಗೆ ಶೂನ್ಯ ಸುಂಕದ ದರದಲ್ಲಿ ಸರಕುಗಳನ್ನು ರಫ್ತು ಮಾಡುವ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಭಾರತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇದರ ಲಾಭ ಪಡೆಯಲಿವೆ.
ಭಾರತ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಬೈಕ್ ಗಳ ಮೇಲಿನ ಸುಂಕ ಇಳಿಸಿದರೂ, ಸಾಗಾಣಿಕೆ ವೆಚ್ಚ ಮತ್ತು ವೇಗವಾಗಿ ಕಳುಹಿಸಲು ಸಾಧ್ಯವಾಗುವುದರಿಂದ ಭಾರತಕ್ಕೆ ಸನಿಹದಲ್ಲಿರುವ ಥಾಯ್ಲೆಂಡ್ ನಿಂದ ಆಮದು ಮಾಡಿಕೊಳ್ಳುವುದೇ ಹೆಚ್ಚು ಲಾಭದಾಯಕ ಎಂದು ಹಾರ್ಲೆ ಕಂಡುಕೊಂಡಿದೆ. ಭಾರತದ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಅಮೆರಿಕ ಜತೆಗೆ ದ್ವಿಪಕ್ಷೀಯ ಮಾತುಕತೆಗೆ ತೆರಳಿದ್ದು, ಈ ಒಪ್ಪಂದದಿಂದ ಅಮೆರಿಕ ಹಾಗೂ ಭಾರತಕ್ಕೆ ಅನುಕೂಲವಾಗಲಿದೆ. ಇದು ಉಭಯ ದೇಶಗಳ ಉತ್ಪಾದಕರು ಮತ್ತು ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ರಫ್ತು ಮಾಡಲು ಅವಕಾಶ ಮಾಡಿಕೊಡಲಿದೆ.