ಬುಡಕಟ್ಟು ಸಮುದಾಯ ಆಧುನಿಕತೆ ಅಪ್ಪಿಕೊಳ್ಳಬೇಕು : ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ರೌಪದಿ ಮುರ್ಮು | PHOTO : PTI
ಹೊಸದಿಲ್ಲಿ: ಬುಡಕಟ್ಟು ಸಮುದಾಯ ಆಧುನಿಕತೆಯನ್ನು ಅಪ್ಪಿಕೊಳ್ಳುವ ಮೂಲಕ ತಮ್ಮ ಸಂಪ್ರದಾಯವನ್ನು ಉತ್ಕೃಷ್ಟಗೊಳಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರೆ ನೀಡಿದ್ದಾರೆ. 77ನೇ ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಸೋಮವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಮುರ್ಮು ಅವರು, ಹೊಸ ಮಜಲಿಗೆ ಏರಿದ ಹಾಗೂ ಉತ್ಕೃಷ್ಟತೆಯ ಹೊಸ ಮೈಲುಗಲ್ಲನ್ನು ತಲುಪಿದ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊವನ್ನು ಪ್ರಶಂಸಿಸಿದರು.
ಸವಾಲುಗಳ ಹೊರತಾಗಿಯೂ ಭಾರತದ ಜಿಡಿಪಿ ಬೆಳವಣಿಗೆಯನ್ನು ಪ್ರಶಂಸಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಕಳೆದ ಒಂದು ದಶಕದಲ್ಲಿ ದೊಡ್ಡ ಸಂಖ್ಯೆಯ ಜನರು ಬಡತನದಿಂದ ಹೊರಬಂದಿದ್ದಾರೆ ಎಂದಿದ್ದಾರೆ. ‘‘ಬುಡಕಟ್ಟು ಜನರ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ಪ್ರಗತಿಯ ಪಯಣದಲ್ಲಿ ಸೇರುವಂತೆ ಅವರನ್ನು ಉತ್ತೇಜಿಸಲು ಹಲವು ನಿರ್ದಿಷ್ಟ ಕಾರ್ಯಕ್ರಮಗಳು ಇವೆ. ಆಧುನಿಕತೆಯನ್ನು ಅಪ್ಪಿಕೊಳ್ಳುವ ಮೂಲಕ ತಮ್ಮ ಸಂಪ್ರದಾಯವನ್ನು ಉತ್ಕೃಷ್ಟಗೊಳಿಸುವಂತೆ ನಾನು ನಮ್ಮ ಬುಡಕಟ್ಟು ಸಮುದಾಯದ ಸಹೋದರ, ಸಹೋದರಿಯರಲ್ಲಿ ಮನವಿ ಮಾಡುತ್ತೇನೆೆ’’ ಎಂದು ಅವರು ಹೇಳಿದರು.
ಭಾರತವು ಸವಾಲವನ್ನು ಅವಕಾಶವನ್ನಾಗಿ ಪರಿವರ್ತಿಸಿದೆ ಹಾಗೂ ಅತ್ಯಧಿಕ ಜಿಡಿಪಿಯನ್ನು ದಾಖಲಿಸಿದೆ ಎಂದು ಮುರ್ಮು ಅವರು ಹೇಳಿದರು. ‘‘ನಮ್ಮ ಆರ್ಥಿಕ ಪ್ರಗತಿಗೆ ರೈತರು ಗಮನಾರ್ಹ ಕೊಡುಗೆ ನೀಡಿದ್ದಾರೆ. ದೇಶವು ಅವರಿಗೆ ಋಣಿಯಾಗಿದೆ’’ ಎಂದು ಅವರು ಹೇಳಿದ್ದಾರೆ. ‘‘ಜಾಗತಿಕ ಮಟ್ಟದಲ್ಲಿ ಹಣದುಬ್ಬರವು ಆತಂಕಕ್ಕೆ ಕಾರಣವಾಗಿದೆ. ಆದರೆ, ಭಾರತದಲ್ಲಿ ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಅದನ್ನು ನಿಯಂತ್ರಿಸಲು ಸಫಲವಾಗಿದೆ.
ಬಡವರಿಗೆ ಹೆಚ್ಚು ವ್ಯಾಪಕ ಭದ್ರತೆ ಒದಗಿಸುವ ಮೂಲಕ ಹಣದುಬ್ಬರದಿಂದ ಜನಸಾಮಾನ್ಯರನ್ನು ರಕ್ಷಿಸುವಲ್ಲಿ ಸರಕಾರ ಸಫಲವಾಗಿದೆ. ಜಾಗತಿಕ ಆರ್ಥಿಕ ಪ್ರಗತಿಗೆ ಜಗತ್ತು ಭಾರತದೆಡೆ ನೋಡುತ್ತಿದೆ ’’ ಎಂದು ಅವರು ಹೇಳಿದ್ದಾರೆ.