ತ್ರಿಪುರಾ: ರಥಕ್ಕೆ ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶ; 6 ಸಾವು, 15 ಮಂದಿಗೆ ಗಾಯ
ಪೊಟೊ -PTI
ಹೊಸದಿಲ್ಲಿ: ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ನಡೆದ ಬೃಹತ್ ರಥೋತ್ಸವದ ವೇಳೆ ಹೈಟೆನ್ಶನ್ ವಿದ್ಯುತ್ ತಂತಿ ರಥಕ್ಕೆ ತಗುಲಿ, ಆರು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಭಗವಾನ್ ಜಗನ್ನಾಥನ 'ಉಲ್ಟಾ ರಥ ಯಾತ್ರಾ' ಉತ್ಸವದ ಸಮಯದಲ್ಲಿ, ಸಂಜೆ 4.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಬ್ಬಿಣದಿಂದ ಮಾಡಲಾದ ರಥಕ್ಕೆ 133 ಕೆವಿ ಓವರ್ಹೆಡ್ ಕೇಬಲ್ ಸ್ಪರ್ಶವಾಗಿದೆ, ಈ ವೇಳೆ ಸಾವಿರಾರು ಜನರು ರಥವನ್ನು ಎಳೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮಾಣಿಕ್ ಸಹಾ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ, "ಕುಮಾರ್ಘಾಟ್ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ, 'ಉಲ್ಟಾ ರಥ' ಎಳೆಯುವ ವೇಳೆ ವಿದ್ಯುತ್ ಸ್ಪರ್ಶದಿಂದ ಹಲವಾರು ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ದುಃಖಿತ ಕುಟುಂಬಕ್ಕೆ ತೀವ್ರ ಸಂತಾಪ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಅವರ ಬೆಂಬಲಕ್ಕೆ ನಿಂತಿದೆ" ಎಂದು ಸಿಎಂ ವಿಷಾದ ವ್ಯಕ್ತಪಡಿಸಿದರು.