ಟ್ರಂಪ್ ಸುಂಕದಿಂದ ಶೇರುಪೇಟೆಯಲ್ಲಿ ರಕ್ತಪಾತ: 8.8 ಲಕ್ಷ ಕೋಟಿ ಕರಗಿದ ಹೂಡಿಕೆದಾರರ ಸಂಪತ್ತು!

ಡೊನಾಲ್ಡ್ ಟ್ರಂಪ್ | PC : PTI
ಹೊಸದಿಲ್ಲಿ: ಎನ್ಎಸ್ಇ ಸೂಚ್ಯಂಕ ನಿಫ್ಟಿ 50 ಸತತ ಐದನೇ ತಿಂಗಳಿಗೆ ಕುಸಿತವನ್ನು ದಾಖಲಿಸಿದೆ. ಇದು 1996ರ ಬಳಿಕ ಅತಿ ದೀರ್ಘ ಅವಧಿಯ ಕುಸಿತವಾಗಿದ್ದು, ಭಾರತವನ್ನು ಅತ್ಯಂತ ಕಳಪೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಾಗತಿಕ ಮಾರುಕಟ್ಟೆಯನ್ನಾಗಿ ಮಾಡಿದೆ. ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಸಂಕಷ್ಟ ಇನ್ನಷ್ಟು ಮುಂದುವರಿಯುವ ಲಕ್ಷಣಗಳು ಕಂಡು ಬರುತ್ತಿವೆ.
ಗಳಿಕೆಯಲ್ಲಿ ಇಳಿಕೆ, ವಿದೇಶಿ ಹಣದ ನಿರಂತರ ಹೊರಹರಿವು ಮತ್ತು ಅಮೆರಿಕದ ಸುಂಕಗಳ ಕುರಿತು ಅನಿಶ್ಚಿತತೆ ಇವು ಸೆಪ್ಟಂಬರ್ನಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ್ದ ನಿಫ್ಟಿ ಅಲ್ಲಿಂದೀಚಿಗೆ ಸುಮಾರು ಶೇ.15ರಷ್ಟು ಕುಸಿಯುವಂತೆ ಮಾಡಿವೆ. ತನ್ಮೂಲಕ ಐದೇ ತಿಂಗಳುಗಳಲ್ಲಿ ಹೂಡಿಕೆದಾರರ ಸಂಪತ್ತು ಸುಮಾರು 85 ಲಕ್ಷ ಕೋಟಿ ರೂ( ಸುಮಾರು ಒಂದು ಲಕ್ಷ ಕೋಟಿ ಡಾಲರ್ )ಗಳಷ್ಟು ಕರಗಿದೆ.
ಅಮೆರಿಕದ ಸುಂಕ ಅನಿಶ್ಚಿತತೆಯ ಪ್ರಸಕ್ತ ಪರಿಸ್ಥಿತಿಯಲ್ಲಿ ಭಾರತೀಯ ಶೇರು ಮಾರುಕಟ್ಟೆಗಳು ಇನ್ನಷ್ಟು ತೊಂದರೆಯನ್ನು ಎದುರಿಸಲಿವೆ ಎಂದು ಹೇಳಿದ ಆದಿತ್ಯ ಬಿರ್ಲಾ ಸನ್ ಲೈಫ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ಮುಖ್ಯ ಹೂಡಿಕೆ ಅಧಿಕಾರಿ ಮಹೇಶ ಪಾಟೀಲ್ ಅವರು, ಹೂಡಿಕೆದಾರರು ಹೆಚ್ಚಿನ ಶೇರುಗಳನ್ನು ಮಾರಾಟ ಮಾಡಿರುವುದರಿಂದ ಅಲ್ಪಾವಧಿಯ ಏರಿಕೆಗಳನ್ನು ನಾವು ಕಾಣಬಹುದು. ಆದರೆ ಭಾರತವು ಇನ್ನು ಕೆಲವು ತಿಂಗಳುಗಳ ಕಾಲ ಶೇರುಗಳ ಬೆಲೆ ಹೆಚ್ಚಾದಾಗ ಅವುಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಾಗಿ ಉಳಿಯಲಿದೆ ಎಂದರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಿನನಿತ್ಯ ಘೋಷಿಸುತ್ತಿರುವ ಸುಂಕ ಏರಿಕೆಗಳು, ಜಾಗತಿಕ ವ್ಯಾಪಾರ ಸಮರದ ಭೀತಿ ಮತ್ತು ಯುಎಸ್ ಆರ್ಥಿಕ ಹಿಂಜರಿತ ಕುರಿತು ಹೂಡಿಕೆದಾರರಲ್ಲಿ ಸೃಷ್ಟಿಯಾಗಿರುವ ಕಳವಳ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವು ಇವೆಲ್ಲವೂ ಶುಕ್ರವಾರ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಅಬ್ಬರದ ಕರಡಿ ಕುಣಿತಕ್ಕೆ ಕಾರಣವಾಗಿದ್ದವು.
ಪ್ರಮುಖ ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಸತತ ಐದನೇ ತಿಂಗಳಿಗೆ ಕುಸಿತವನ್ನು ದಾಖಲಿಸಿದ್ದು,ಇದು ಕಳೆದ 29 ವರ್ಷಗಳಲ್ಲಿ ಅತಿ ದೀರ್ಘವಾದ ಕುಸಿತವಾಗಿದೆ. ಸೆನೆಕ್ಸ್ 1414.33 ಅಂಶಗಳನ್ನು ಕಳೆದುಕೊಂಡು 73,198.10ರಲ್ಲಿ ಮುಕ್ತಾಯಗೊಂಡಿದ್ದರೆ ನಿಫ್ಟಿ 420.35 ಅಂಶಗಳ ನಷ್ಟದೊಂದಿಗೆ 22,124.76ರಲ್ಲಿ ದಿನದಾಟವನ್ನು ಮುಗಿಸಿದೆ.
ಶುಕ್ರವಾರದ ಕರಡಿ ಕುಣಿತದ ಅಬ್ಬರದಲ್ಲಿ 8.8 ಲಕ್ಷ ಕೋಟಿ ರೂ.ಗಳಷ್ಟು ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ಕರಗಿ ಹೋಗಿದೆ. ಸೆ.27ರಂದು 85,978 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿದ್ದ ಸೆನ್ಸೆಕ್ಸ್ ಈವರೆಗೆ 12,780 ಅಂಶ ಕುಸಿದಿದ್ದರೆ, ನಿಫ್ಟಿ 4,512 ಅಂಶಗಳ ಕುಸಿತವನ್ನು ದಾಖಲಿಸಿದೆ.
ವಿದೇಶಿ ಹೂಡಿಕೆದಾರರು ಸೆಪ್ಟಂಬರ್ ಅಂತ್ಯದಿಂದೀಚಿಗೆ 25 ಶತಕೋಟಿ ಡಾಲರ್ ನಿವ್ವಳ ಮೌಲ್ಯದ ಭಾರತೀಯ ಶೇರುಗಳನ್ನು ಮಾರಿದ್ದರೆ,ಫೆಬ್ರವರಿಯಲ್ಲಿ ಈ ಪ್ರಮಾಣ 4.1 ಶತಕೋಟಿ ಡಾಲರ್ ಆಗಿದೆ.
ಮಾ.4ರಿಂದ ಮೆಕ್ಸಿಕೋ ಮತ್ತು ಕೆನಡಾಗಳಿಂದ ಆಮದುಗಳ ಮೇಲೆ ಶೇ.25ರಷ್ಟು ಸುಂಕವನ್ನು ಮತ್ತು ಅಂದಿನಿಂದಲೇ ಚೀನಾದಿಂದ ಆಮದುಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಪ್ರಕಟಿಸಿದ್ದು, ಇದು ಪೂರ್ಣ ಪ್ರಮಾಣದಲ್ಲಿ ಜಾಗತಿಕ ವ್ಯಾಪಾರ ಸಮರದ ಭೀತಿಯನ್ನು ಹುಟ್ಟಿಸಿದೆ. ಸುಂಕ ಹೆಚ್ಚಳಕ್ಕೆ ಚೀನಾ ಇನ್ನೂ ಪ್ರತಿಕ್ರಿಯಿಸಿಲ್ಲ.
ಶೇರು ಮಾರುಕಟ್ಟೆಗಳು ಅನಿಶ್ಚಿತತೆಯನ್ನು ಇಷ್ಟಪಡುವುದಿಲ್ಲ ಮತ್ತು ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದಲೂ ಅನಿಶ್ಚಿತತೆ ಹೆಚ್ಚುತ್ತಲೇ ಇದೆ ಎಂದು ಹೇಳಿದ ಜಿಯೊಜಿತ್ ಫೈನಾನ್ಶಿಯಲ್ ಸರ್ವಿಸಸ್ನ ಚೀಫ್ ಇನ್ವೆಸ್ಟ್ಮೆಂಟ್ ಸ್ಟ್ರಾಟಜಿಸ್ಟ್ ವಿ.ಕೆ.ವಿಜಯಕುಮಾರ್ ಅವರು,ಟ್ರಂಪ್ ಅವರ ಸರಣಿ ಸುಂಕ ಪ್ರಕಟಣೆಗಳು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿವೆ. ಚೀನಾದಿಂದ ಆಮದುಗಳ ಮೇಲೆ ಹೆಚ್ಚುವರಿ ಶೇ.10ರಷ್ಟು ಸುಂಕವನ್ನು ಹೇರುವ ಟ್ರಂಪ್ ಇತ್ತೀಚಿನ ಪ್ರಕಟಣೆಯು,ಅವರು ತನ್ನ ಅಧಿಕಾರಾವಧಿಯ ಆರಂಭದ ತಿಂಗಳುಗಳನ್ನು ಇತರ ದೇಶಗಳಗೆ ಸುಂಕ ಬೆದರಿಕೆಗಳನ್ನು ಒಡ್ಡಲು ಬಳಸಿಕೊಳ್ಳಲಿದ್ದಾರೆ ಮತ್ತು ನಂತರ ಅಮೆರಿಕಕ್ಕೆ ಅನುಕೂಲಕರವಾಗಿ ಇತ್ಯರ್ಥಕ್ಕಾಗಿ ಸಂಧಾನ ಮಾತುಕತೆಗಳನ್ನು ನಡೆಸಲಿದ್ದಾರೆ ಎಂಬ ಮಾರುಕಟ್ಟೆಯ ಅಭಿಪ್ರಾಯವನ್ನು ದೃಢಪಡಿಸಿದೆ ಎಂದು ಹೇಳಿದರು.