ಸುಂಕ ಕಡಿತ ಕುರಿತ ಟ್ರಂಪ್ ಹೇಳಿಕೆ ; ಮೋದಿ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು: ಕಾಂಗ್ರೆಸ್ ಆಗ್ರಹ

ಹೊಸದಿಲ್ಲಿ: ಅಮೆರಿಕದ ಉತ್ಪನ್ನಗಳ ಮೇಲಿನ ತನ್ನ ಸುಂಕವನ್ನು ಭಾರತವು ಕಡಿತಗೊಳಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಸುಂಕ ಕಡಿತವು ರೈತರು ಮತ್ತು ಉತ್ಪಾದಕರ ಹಿತಾಸಕ್ತಿಗೆ ಹಾನಿ ಮಾಡುವುದೇ ಎಂಬ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ.
‘‘ಅಮೆರಿಕನ್ನರ ಜೊತೆಗಿನ ವ್ಯಾಪಾರದ ಬಗ್ಗೆ ಆ ದೇಶದ ಸರಕಾರದ ಜೊತೆ ಮಾತುಕತೆ ನಡೆಸಲು ವಾಣಿಜ್ಯ ಸಚಿವ ಪೀಯುಶ್ ಗೋಯಲ್ ವಾಶಿಂಗ್ಟನ್ ಡಿಸಿಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ’’ ಎಂಬುದಾಗಿ ರಮೇಶ್ ಹೇಳಿದ್ದಾರೆ. ಅವರು ‘ಎಕ್ಸ್’ನಲ್ಲಿನ ತನ್ನ ಸಂದೇಶದ ಜೊತೆಗೆ, ಭಾರತದ ಜೊತೆಗಿನ ವ್ಯಾಪಾರ ಮತ್ತು ಸುಂಕದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡುತ್ತಿರುವ ವೀಡಿಯೊವೊಂದನ್ನೂ ಲಗತ್ತಿಸಿದ್ದಾರೆ.
‘‘ಅಮೆರಿಕದಿಂದ ಮಾಡಿಕೊಳ್ಳುವ ಆಮದುಗಳ ಮೇಲೆ ಭಾರತವು ಅಧಿಕ ಸುಂಕ ವಿಧಿಸುತ್ತಿತ್ತು, ಹಾಗಾಗಿ, ಆ ದೇಶದಲ್ಲಿ ಅಮೆರಿಕದ ವಸ್ತುಗಳನ್ನು ಮಾರಾಟಮಾಡಲು ಕಷ್ಟವಾಗುತ್ತಿತ್ತು. ಈಗ ಅಧಿಕ ಸುಂಕವನ್ನು ಕಡಿಮೆ ಮಾಡಲು ಭಾರತ ಒಪ್ಪಿದೆ’’ ಎಂಬುದಾಗಿ ಟ್ರಂಪ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, ‘‘ಮೋದಿ ಸರಕಾರವು ಯಾವುದಕ್ಕೆ ಒಪ್ಪಿಕೊಂಡಿದೆ? ಭಾರತೀಯ ರೈತರು ಮತ್ತು ಭಾರತೀಯ ಉತ್ಪಾದಕರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆಯೇ? ಸಂಸತ್ ಮಾರ್ಚ್ 10ರಂದು ಪುನರಾರಂಭಗೊಳ್ಳುವಾಗ ಪ್ರಧಾನಿ ಈ ವಿಷಯದಲ್ಲಿ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’’ ಎಂದು ಹೇಳಿದ್ದಾರೆ.
ಟ್ರಂಪ್ ಗುರುವಾರ ಹೀಗೆ ಹೇಳಿದ್ದಾರೆ: ‘‘ಭಾರತವು ನಮ್ಮ ಉತ್ಪನ್ನಗಳಿಗೆ ಅತ್ಯಧಿಕ ಸುಂಕ ವಿಧಿಸುತ್ತಿತ್ತು. ನಾವು ಭಾರತದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದು ನಿರ್ಬಂಧಾತ್ಮಕವಾಗಿತ್ತು. ಅಲ್ಲಿ ನಮ್ಮ ವ್ಯಾಪಾರ ತುಂಬಾ ಕಡಿಮೆಯಿತ್ತು. ಅವರು ಈಗ ಒಪ್ಪಿಕೊಂಡಿದ್ದಾರೆ. ಈಗ ಅವರು ತಮ್ಮ ಸುಂಕವನ್ನು ಗಣನೀಯವಾಗಿ ಕಡಿಮೆ ಮಾಡಲು ಒಪ್ಪಿಕೊಂಡಿದ್ದಾರೆ. ಯಾಕೆಂದರೆ, ಅವರು ಏನು ಮಾಡಿದ್ದಾರೆ ಎನ್ನುವುದನ್ನು ಕೊನೆಗೂ ಒಬ್ಬರು ಬಹಿರಂಗಪಡಿಸಿದ್ದಾರೆ’’.