ಸಂಸತ್ ಭದ್ರತಾ ವೈಫಲ್ಯ | ಖಾಲಿ ಗ್ಯಾಸ್ ಕ್ಯಾನ್ ತೋರಿಸಲು ಟಿವಿ ಪತ್ರಕರ್ತರ ಕಿತ್ತಾಟ: ವಿಡಿಯೋ ವೈರಲ್!
Screengrab:X
ಹೊಸದಿಲ್ಲಿ: ಸಂಸತ್ ಭವನದಲ್ಲಿ ನಡೆದ ಹಳದಿ ಗ್ಯಾಸ್ ದಾಳಿ ಪ್ರಕರಣದ ವರದಿಯನ್ನು ಮಾಡುವ ವೇಳೆ ಗ್ಯಾಸ್ ಕ್ಯಾನಿಸ್ಟರ್ ಗಾಗಿ ಟಿವಿ ಮಾಧ್ಯಮದ ವರದಿಗಾರರು ಪರಸ್ಪರ ಜಗಳವಾಡಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪ್ರತಿಭಟನಾಕಾರರು ಸಿಡಿಸಿದ್ದಾರೆನ್ನಲಾದ ಗ್ಯಾಸ್ ಕ್ಯಾನಿಸ್ಟರ್ನ ಖಾಲಿ ಡಬ್ಬವನ್ನು ಹಿಡಿದು ಟಿವಿ 9 ವರದಿಗಾರರೊಬ್ಬರು ಲೈವ್ ನಲ್ಲಿ ಮಾತಾಡುತ್ತಿರುವಾಗಲೇ ಉಳಿದ ಪತ್ರಕರ್ತರು ಅದನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಪತ್ರಕರ್ತರು ಪರಸ್ಪರ ಎಳೆದಾಡಿದ್ದು, ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಝೀ ನ್ಯೂಸ್, ಟಿವಿ 9, ನ್ಯೂಸ್ 18, ವರದಿಗಾರರು ತಮ್ಮ ಸಂಸ್ಥೆಯ ಲೋಗೋ ಇರುವ ಮೈಕ್ಗಳನ್ನು ಕೈಯಲ್ಲಿ ಹಿಡಿದುಕೊಂಡೇ ಎಳೆದಾಟದಲ್ಲಿ ಭಾಗಿಯಾಗಿದ್ದಾರೆ. ನ್ಯೂಸ್ 18 ವರದಿಗಾರ್ತಿ ಪಲ್ಲವಿ ಘೋಷ್ ಕೂಡಾ ಈ ಎಳೆದಾಡುವ ಪತ್ರಕರ್ತರ ಗುಂಪಿನಲ್ಲಿ ಸೇರಿಕೊಂಡಿದ್ದಾರೆ.
ʼನಮ್ಮಲ್ಲೇ ಮೊದಲುʼ ಎಂದು ಸುದ್ದಿ ಬ್ರೇಕ್ ಮಾಡುವ ಟಿವಿ ಮಾಧ್ಯಮಗಳ ಹಪಾಹಪಿಗೆ ನೆಟ್ಟಿಗರುಟ್ರೋಲ್ ಮಾಡಿದ್ದಾರೆ.
ಇನ್ನು ಲೋಕಸಭೆಯ ಒಳಗೆ ಕಲರ್ ಸ್ಮೋಕ್ ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮೂಲದ ಇಬ್ಬರನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಬಂಧಿತರನ್ನು ನಿರಂಜನ್ ಹಾಗೂ ಸಾಗರ್ ಶರ್ಮ ಎಂದು ಗುರುತಿಸಲಾಗಿದೆ. ಸಂಸತ್ತಿನ ಹೊರಗೆ ಪ್ರತಿಭಟಿಸಿದ ಕಾರಣಕ್ಕಾಗಿ ಓರ್ವ ಮಹಿಳೆಯನ್ನೂ ಸೇರಿ ಇಬ್ಬರನ್ನು ಬಂಧಿಸಲಾಗಿದ್ದು, ಮಹಿಳೆಯನ್ನು ಹರ್ಯಾಣದ ಹಿಸಾರ್ ನಿವಾಸಿ 42 ವರ್ಷದ ನೀಲಂ ಎಂದು ಗುರುತಿಸಲಾಗಿದೆ. ಮತ್ತೊಬ್ಬರನ್ನು ಮಹಾರಾಷ್ಟ್ರದ ಲಾತೂರ್ ನಿವಾಸಿ ಅಮೋಲ್ ಶಿಂಧೆ ಎಂದು ಗುರುತಿಲಾಗಿದೆ.