27 ವರ್ಷ ಬಳಿಕ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಖುಲಾಸೆ!
photo: freepik
ಹೊಸದಿಲ್ಲಿ: ಹತ್ಯೆ ಪ್ರಕರಣವೊಂದರಲ್ಲಿ 27 ವರ್ಷಗಳ ಹಿಂದೆ ಬಂಧಿಸಿದ ಹಾಗೂ ಈ ಪ್ರಕರಣದಲ್ಲಿ 23 ವರ್ಷಗಳ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಆರೋಪಿಗಳನ್ನು ದೆಹಲಿ ಹೈಕೋರ್ಟ್ ದೋಷಮುಕ್ತಗೊಳಿಸಿದೆ. ಹತ್ಯೆಗೀಡಾದ ವ್ಯಕ್ತಿಯ ಜತೆಗೆ ಕೊನೆಯ ಬಾರಿ ಕಾಣಿಸಿಕೊಂಡಿದ್ದರು ಎಂಬ ಅಂಶವನ್ನೇ ಪ್ರಮುಖ ಪುರಾವೆಯಾಗಿ ಪರಿಗಣಿಸಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಖುಲಾಸೆಗೆ ಹೈಕೋರ್ಟ್ ಆದೇಶ ನೀಡಿದೆ.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ಮತ್ತು ಮನೋಜ್ ಜೈನ್ ಅವರಿದ್ದ ಪೀಠ ಈ ತೀರ್ಪು ನೀಡಿದ್ದು, "ಕೇವಲ ಕೊನೆಯ ಬಾರಿ ಜತೆಗೆ ಕಾಣಿಸಿಕೊಂಡಿದ್ದರು ಎಂಬ ಸಿದ್ಧಾಂತದ ಆಧಾರದಲ್ಲಿ ಆರೋಪಿಗಳನ್ನು ತಪ್ಪಿತಸ್ಥ ಎಂದು ನಿರ್ಣಯಿಸುವುದು ಸೂಕ್ತವಲ್ಲ. ಇದು ಕೂಡಾ ಸಂದೇಹದ ಛಾಯೆಯಿಂದಾಚೆಗೆ ದೃಢಪಟ್ಟಿಲ್ಲ" ಎಂದು ಸ್ಪಷ್ಟಪಡಿಸಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಆರೋಪಿಗಳು ಹಾಗೂ ಮೃತ ವ್ಯಕ್ತಿ ಜತೆಗೆ ಕೆಲಸ ಮಾಡುತ್ತಿದ್ದರು. ಈ ಕಾರಣದಿಂದ ಅವರು ಜತೆಗಿದ್ದುದು ಅಸಹಜವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಾವಿಗೆ ಮುನ್ನ ಮೃತ ವ್ಯಕ್ತಿಯ ಜತೆಗೆ ಆರೋಪಿಗಳನ್ನು ನೋಡಿದ್ದ ಎನ್ನಲಾದ ವ್ಯಕ್ತಿ ವಿಚಾರಣೆ ವೇಳೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ ಎಂದು ಹೈಕೋರ್ಟ್ ಉಲ್ಲೇಖಿಸಿದೆ. ವಿದೇಶಿ ಕುಮಾರ್ ಮತ್ತು ರಾಮ್ನಾಥ್ ಅವರನ್ನು 1997ರಲ್ಲಿ ಬಂಧಿಸಲಾಗಿದ್ದು, ಇವರು ಸಲ್ಲಿಸಿದ ಮೇಲ್ಮನವಿಯ ವಿಚಾರದಲ್ಲಿ ಪೊಲೀಸ್ ತನಿಖೆ ಸಮರ್ಪಕವಾಗಿಲ್ಲ ಎಂದು ಕೋರ್ಟ್ ವಿಶ್ಲೇಷಿಸಿದೆ.
ಪೊಲೀಸರು ನಡೆಸಿದ ತನಿಖೆಯು, ಸಂತ್ರಸ್ತ ವ್ಯಕ್ತಿಯ ಜತೆ ಆರೋಪಿಗಳು ಕೊನೆಯದಾಗಿ ಕಾಣಿಸಿಕೊಂಡಿದ್ದರು ಮತ್ತು ಅವರಿಂದ ರಕ್ತಸಿಕ್ತ ಬಟ್ಟೆಯನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಮೃತ ವ್ಯಕ್ತಿಯ ಬಳಿ ಚಾಕು ಇತ್ತು ಎಂಬ ಸಾಂದರ್ಭಿಕ ಪುರಾವೆಯನ್ನು ಆಧರಿಸಿದೆ. ಈ ಪುರಾವೆ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ 2001ರಲ್ಲಿ ನೀಡಿದ್ದ ತೀರ್ಪನ್ನು ಹೈಕೋರ್ಟ್ ತಳ್ಳಿಹಾಕಿದೆ.