ಭೂಮಿ ತಕರಾರು: ಗುಜರಾತ್ ನಲ್ಲಿ ಇಬ್ಬರು ದಲಿತರನ್ನು ಹತ್ಯೆಗೈದ ದುಷ್ಕರ್ಮಿಗಳು
ಸುರೇಂದ್ರನಗರ್: ಭೂವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಇತರೆ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಗಳ ಗುಂಪೊಂದು ಇಬ್ಬರು ದಲಿತರನ್ನು ಹತ್ಯೆಗೈದಿರುವ ಘಟನೆ ಗುರುವಾರ ಗುಜರಾತ್ ರಾಜ್ಯದ ಸುರೇಂದ್ರನಗರ್ ಜಿಲ್ಲೆಯಲ್ಲಿ ನಡೆದಿದೆ ಎಂದು indianexpress.com ವರದಿ ಮಾಡಿದೆ.
ಈ ಘಟನೆಯು ಚೂಡಾ ತಾಲ್ಲೂಕಿನ ಸಮಧಿಯಾಲಾ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಬುಧವಾರ ರಾತ್ರಿ ಸುರೇಂದ್ರನಗರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹಲ್ಲೆಗೀಡಾಗಿದ್ದ ಆಲ್ಜಿ ಪಾರ್ಮರ್ (60) ಹಾಗೂ ಅವರ ಸಹೋದರ ಮನೋಜ್ ಪಾರ್ಮರ್ (54) ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡಿದ್ದ ಪಾರುಲ್‌ಬೆನ್ ಪಾರ್ಮರ್ ಎಂಬುವವರ ದೂರನ್ನು ಆಧರಿಸಿ ಕಥಿ ಸಮುದಾಯಕ್ಕೆ ಸೇರಿರುವ ಆರು ಮಂದಿ ಗುರುತು ಪತ್ತೆಯಾಗಿರುವ ವ್ಯಕ್ತಿಗಳು ಹಾಗೂ 12-15 ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಗುರುವಾರ ಬೆಳಗ್ಗೆ ಚೂಡಾ ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಮಹಾ ನಿರೀಕ್ಷಕ (ರಾಜ್‌ಕೋಟ್ ಮತ್ತು ಸುರೇಂದ್ರನಗರ್ ವಲಯ) ಅಶೋಕ್ ಕುಮಾರ್ ಯಾದವ್ ತಿಳಿಸಿದ್ದಾರೆ.
"ಎರಡು ವಿಭಿನ್ನ ಸಮುದಾಯಗಳ ಸದಸ್ಯರ ನಡುವೆ ಭೂವ್ಯಾಜ್ಯವಿದ್ದುದರಿಂದ ಸಂತ್ರಸ್ತರ ಮೇಲೆ ದಾಳಿ ನಡೆದಿದೆ. ಸಮಧಿಯಾಲಾ ಗ್ರಾಮದ ತುಂಡು ಭೂಮಿಯೊಂದರ ಕುರಿತ ದಲಿತ ಹಾಗೂ ಕಥಿ ದರ್ಬಾರ್ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಗಳ ನಡುವೆ ವ್ಯಾಜ್ಯವಿತ್ತು" ಎಂದು ಅವರು ಹೇಳಿದ್ದಾರೆ.
"ಈ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದರೆ, ಮಹಿಳೆಯೋರ್ವಳು ಸೇರಿದಂತೆ ಇನ್ನೂ ಕೆಲವು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ" ಎಂದು ಯಾದವ್ ತಿಳಿಸಿದ್ದಾರೆ.
ತುಂಡು ಭೂಮಿಯ ವ್ಯಾಜ್ಯದ ಕುರಿತು ನ್ಯಾಯಾಲಯದಲ್ಲಿ 1998ರಿಂದ ಪ್ರಕರಣ ನಡೆಯುತ್ತಿದ್ದು, ದಲಿತ ಕುಟುಂಬವು ಈಗಾಗಲೇ ಕೆಳ ಹಂತದ ನ್ಯಾಯಾಲಯದಲ್ಲಿ ಗೆಲುವು ಸಾಧಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ, ಅಹಮದಾಬಾದ್‌ನಲ್ಲಿ ವಾಸಿಸುತ್ತಿರುವ ದೂರುದಾರಳು ತನ್ನ ಇಬ್ಬರು ಮೈದುನರು(ಮೃತಪಟ್ಟಿರುವ ಪತಿಯ ಸಹೋದರರು) ಹಾಗೂ ಅವರಿಬ್ಬರ ಪತ್ನಿಯರೊಂದಿಗೆ ಸಮಧಿಯಾಲಾ ಗ್ರಾಮದಲ್ಲಿರುವ ತಮ್ಮ ಪಿತ್ರಾರ್ಜಿತ ಆಸ್ತಿಯಾದ ಕೃಷಿ ಭೂಮಿಯಲ್ಲಿ ಬಿತ್ತನೆ ನಡೆಸಲು ತೆರಳಿದ್ದರು.
ಆರೋಪಿಗಳು ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದು, ನನಗೆ ಹಾಗೂ ನನ್ನ ಇನ್ನಿತರ ಕುಟುಂಬದ ಸದಸ್ಯರಿಗೆ ದೀರ್ಘಕಾಲದಿಂದ ಬೆದರಿಸುತ್ತಿದ್ದರು ಎಂದು ದೂರುದಾರಳು ಆರೋಪಿಸಿದ್ದಾಳೆ.
ಪ್ರಾಥಮಿಕ ಮಾಹಿತಿ ವರದಿ ಪ್ರಕಾರ, ದೂರುದಾರರು ನೆಲವನ್ನು ಉತ್ತಿ ಮರಳುವಾಗ ಸುಮಾರು 20 ಮಂದಿಯ ಗುಂಪೊಂದು ದೊಣ್ಣೆ ಹಾಗೂ ಹರಿತ ಆಯುಧಗಳೊಂದಿಗೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಅಮ್ರಭಾಯ್ ಖಚರ್ ಎಂಬಾತನ ನೇತೃತ್ವದಲ್ಲಿ ಆತನ ಸಹೋದರ ಹಾಗೂ ಮಕ್ಕಳು ದೂರುದಾರರ ವಾಹನದ ಮೇಲೆ ದಾಳಿ ನಡೆಸಿದ್ದು, ಈ ಭೂಮಿ ನಮಗೆ ಸೇರಿದ್ದು, ಇಲ್ಲಿಗೆ ಯಾರೂ ಪ್ರವೇಶಿಸಬಾರದು ಎಂದು ಹೇಳುತ್ತಾ ಅವರನ್ನು ಥಳಿಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ವರದಿಯಲ್ಲಿ ದಾಖಲಿಸಲಾಗಿದೆ.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಹೋದರರಾದ ಆಲ್ಜಿಭಾಯ್ ಹಾಗೂ ಮನೋಜ್‌ಭಾಯ್ ಪಾರ್ಮರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರೆ, ದಾಳಿಯಲ್ಲಿ ಗಾಯಗೊಂಡಿರುವ ಓರ್ವ ಮಹಿಳೆ ಹಾಗೂ ಓರ್ವ ಟ್ರ್ಯಾಕ್ಟರ್ ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಹತ್ಯೆ, ಹತ್ಯೆಗಾಗಿ ಪ್ರಯತ್ನ ಹಾಗೂ ಗಲಭೆ ನಡೆಸಿದ ಆರೋಪದಲ್ಲಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.