ವಿವಾಹಕ್ಕೆ ಎರಡು ದಿನಗಳು ಬಾಕಿಯಿರುವಾಗ ಅನಾರೋಗ್ಯಕ್ಕೀಡಾದ ವಧು: ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ವರ!
ಸಾಂದರ್ಭಿಕ ಚಿತ್ರ | Photo: PTI
ದುರ್ಗಾಪುರ/ಕೋಲ್ಕತ್ತಾ: ವಿವಾಹಕ್ಕೆ ಎರಡು ದಿನಗಳು ಬಾಕಿಯಿರುವಾಗ ಅನಾರೋಗ್ಯಕ್ಕೀಡಾದ ವಧುವೊಬ್ಬರಿಗೆ ವರ ಆಸ್ಪತ್ರೆಯ ವಾರ್ಡ್ ನಲ್ಲೇ ತಾಳಿ ಕಟ್ಟಿದ್ದು, ಹಿರಿಯರು ಇಬ್ಬರಿಗೂ ಶುಭ ಹಾರೈಸಿರುವ ಘಟನೆ ಶನಿವಾರ ನಡೆದಿದೆ ಎಂದು timesofindia ವರದಿ ಮಾಡಿದೆ.
ವಧುವಿನ ಅನಾರೋಗ್ಯದ ಸುದ್ದಿ ತಿಳಿದು ದಿಲ್ಲಿಯಿಂದ ಆಸ್ಪತ್ರೆಗೆ ಧಾವಿಸಿದ ವರನು, ವೈದ್ಯರು ಹಾಗೂ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ ಸಮ್ಮುಖದಲ್ಲೇ ವಧುವಿಗೆ ಹೂವಿನ ಹಾರ ಹಾಕಿ, ಹಣೆಗೆ ಸಿಂಧೂರ ಇಟ್ಟು ವಿವಾಹ ಶಾಸ್ತ್ರ ಪೂರೈಸಿದ್ದಾನೆ.
ದಿಲ್ಲಿ ಮೂಲದ ಸಂಸ್ಥೆಯೊಂದರಲ್ಲಿ ಮೈಕ್ರೊಬಯಾಲಜಿಸ್ಟ್ ಆಗಿರುವ ಸುಚರಿತಾ ಪಾತ್ರ ಹಾಗೂ ನೊಯ್ಡಾ ಮೂಲದ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿರುವ ಅಮಿತ್ ಮುಖರ್ಜಿ ಅವರ ವಿವಾಹವು ಎರಡು ವರ್ಷಗಳ ಹಿಂದೆಯೇ ನಿಗದಿಯಾಗಿತ್ತು. ವರ ಹಾಗೂ ಆತನ ಕುಟುಂಬದ ಸದಸ್ಯರು ಅದಾಗಲೇ ದುರ್ಗಾಪುರ ತಲುಪಿದ್ದರಿಂದ ಎರಡೂ ಕುಟುಂಬಗಳಿಗೆ ವಿವಾಹ ದಿನಾಂಕ ತಪ್ಪುವುದು ಬೇಡವಾಗಿತ್ತು.
ಹೀಗಾಗಿ, ಸುಚರಿತಾರನ್ನು ಆ್ಯಂಬುಲೆನ್ಸ್ ನಲ್ಲಿ ವಿವಾಹ ಸಮಾರಂಭಕ್ಕೆ ಕರೆದೊಯ್ದು, ವಿವಾಹ ಶಾಸ್ತ್ರಗಳ ಅಂತ್ಯಗೊಂಡ ಒಂದು ಗಂಟೆಯ ನಂತರ ಮರಳಿ ಆಸ್ಪತ್ರೆಗೆ ಕರೆ ತರಬಹುದೇ ಎಂದು ಅವರು ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಆದರೆ, ದುರ್ಗಾಪುರದಲ್ಲಿರುವ ಲೈಫ್ ಕೇರ್ ಆಸ್ಪತ್ರೆಯ ಪ್ರಾಧಿಕಾರಗಳು ಆಸ್ಪತ್ರೆಯ ವಾರ್ಡ್ ನೊಳಗೆ ವಿವಾಹ ಶಾಸ್ತ್ರ ನೆರವೇರಿಸಲು ನಿರ್ದೇಶಕರ ಮಂಡಳಿಯಿಂದ ವಿಶೇಷ ಅನುಮತಿಯನ್ನು ಪಡೆದು, ಅದು ನೆರವೇರುವಂತೆ ನೋಡಿಕೊಂಡಿದ್ದಾರೆ.
ವಿವಾಹ ಶಾಸ್ತ್ರಗಳು ಮುಕ್ತಾಯಗೊಂಡ ನಂತರ ಅಮಿತ್ ಕುಟುಂಬದ ಸದಸ್ಯರು ಹರ್ಯಾಣದಲ್ಲಿನ ತಮ್ಮ ನಿವಾಸಕ್ಕೆ ರವಿವಾರ ಸಂಜೆಯೇ ಮರಳಿದರೆ, ಅಮಿತ್ ಮಾತ್ರ ತಮ್ಮ ನವವಿವಾಹಿತ ಪತ್ನಿಯ ಬಳಿಯೇ ಉಳಿಯಲು ನಿರ್ಧರಿಸಿದ್ದಾರೆ. ನಾಲ್ಕೈದು ದಿನಗಳಲ್ಲಿ ಸುಚರಿತಾ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ದಂಪತಿಗಳು ನೊಯ್ಡಾಗೆ ಮರಳಲಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. “ವಿವಾಹವನ್ನು ಮತ್ತೊಂದು ದಿನ ನೋಂದಣಿ ಕೂಡಾ ಮಾಡಲಾಗುವುದು” ಎಂದು ಸುಚರಿತಾರ ತಂದೆ ತಿಳಿಸಿದ್ದಾರೆ.