ದಬ್ಬಾಳಿಕೆಯ ಕ್ರಮ: ವಿದ್ಯಾರ್ಥಿ ಮುಖಂಡರ ಮೇಲೆ ಎನ್ ಐ ಎ ದಾಳಿಗೆ ಆಕ್ರೋಶ
ಹೊಸದಿಲ್ಲಿ: ಹಲವು ಮಂದಿ ಸಾಮಾಜಿಕ ಹೋರಾಟಗಾರರ ನಿವಾಸ ಮತ್ತು ಕಚೇರಿಗಳ ಮೇಲೆ ಸೆಪ್ಟೆಂಬರ್ 5ರಂದು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ದಾಳಿ ನಡೆಸಿರುವ ಕ್ರಮವನ್ನು ಹಲವು ಸಂಘಟನೆಗಳು ಖಂಡಿಸಿವೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ನ ರಾಷ್ಟ್ರೀಯ ಕಾರ್ಯದರ್ಶಿ ಸೀಮಾ ಆಜಾದ್ ಮತ್ತು ಪೂರ್ವ ಉತ್ತರ ಪ್ರದೇಶದ ವಿವಿಧ ವಿದ್ಯಾರ್ಥಿ ಮುಖಂಡರ ಮನೆಗಳ ಮೇಲೆ, ನಿಷೇಧಿತ ನಕ್ಸಲ್ ಸಂಘಟನೆಗಳ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ದಾಳಿ ನಡೆದಿತ್ತು. ಕಳೆದ ಜೂನ್ನಲ್ಲಿ ನಕ್ಸಲೀಯರ ವಿರುದ್ಧ ಎಫ್ಐಆರ್ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗ್ರಾಜ್, ದಿಯೊರಿಯಾ, ವಾರಣಾಸಿ, ಚಂದೌಲಿ ಮತ್ತು ಅಝಂಗಢ ಜಿಲ್ಲೆಗಳಲ್ಲಿ ದಾಳಿ ನಡೆಸಿತ್ತು.
ಈ ಬಗ್ಗೆ ಎನ್ಐಎ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಪಿಯುಸಿಎಲ್ ಮತ್ತು ಬಿಎಸ್ಎಂ ಪದಾಧಿಕಾರಿಗಳು ಹೇಳಿಕೆ ನೀಡಿದಂತೆ, ಎನ್ಐಎ ಅಧಿಕಾರಿಗಳು ಸಿಮ್ಕಾರ್ಡ್, ಲ್ಯಾಪ್ಟಾಪ್, ಪುಸ್ತಕ, ಕರಪತ್ರ ಮತ್ತು ನಿಯತಕಾಲಿಕಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ದಾಳಿಯ ಮೂಲಕ ಎನ್ಐಎ ದಮನಕಾರಿ ಕ್ರಮಕ್ಕೆ ಮುಂದಾಗಿದೆ ಎಂದು ಪಿಯುಸಿಎಲ್ ರಾಷ್ಟ್ರೀಯ ಅಧ್ಯಕ್ಷೆ ಕವಿತಾ ಶ್ರೀವಾಸ್ತವ ದೂರಿದ್ದಾರೆ. ತಕ್ಷಣವೇ ಎಫ್ಐಆರ್ ರದ್ದುಗೊಳಿಸಿ ತನಿಖೆ ಸ್ಥಗಿತಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.
ಎಲ್ಲ ಹೋರಾಟಗಾರರಿಗೆ ಮತ್ತು ವಿದ್ಯಾರ್ಥಿ ಮುಖಂಡರಿಗೆ ನೋಟಿಸ್ ನೀಡಲಾಗಿದ್ದು, ಲಕ್ನೋ ಕಚೇರಿ ಮುಂದೆ ತನಿಖೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ಹಿರಿಯ ವಕೀಲ ಕೆ.ಕೆ.ರಾಯ್ ಹೇಳಿದ್ದಾರೆ.
ಬಿಎಸ್ಎಂ ಅಧ್ಯಕ್ಷೆ ಆಕಾಂಕ್ಷಾ ಆಜಾದ್ ಅವರಿಗೆ ಸೆಪ್ಟೆಂಬರ್ 12ರಂದು ಲಕ್ನೋ ಕಚೇರಿಗೆ ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮಾವೋವಾದಿಗಳ ಜತೆ ಸಂಪರ್ಕ ಇರುವ ಶಂಕೆ ಇದೆ ಎಂದು ಅಧಿಕಾರಿಗಳು ದಾಳಿ ವೇಳೆ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.
ಎನ್ಐಎ ಅಧಿಕಾರಿಗಳು ಆಕಾಂಕ್ಷಾ ಹಾಗೂ ಸಹೋದ್ಯೋಗಿ ಸಿದ್ಧಿ ಎಂಬುವವರನ್ನು ಮುಂಜಾನೆ 5.30 ರಿಂದ ಮಧ್ಯಾಹ್ನ 2 ಗಂಟೆವೆರೆಗೆ ಬಂಧನದಲ್ಲಿಟ್ಟಿದ್ದರು ಎಂದು ಬಿಎಸ್ಎಂ ಆಪಾದಿಸಿದೆ. ಎನ್ಐಎ ತಂಡ ಸಿಮ್ಕಾರ್ಡ್, ಲ್ಯಾಪ್ಟಾಪ್, ಪುಸ್ತಕ, ಕರಪತ್ರ ಮತ್ತು ನಿಯತಕಾಲಿಕಗಳನ್ನು ವಶಪಡಿಸಿಕೊಂಡಿದೆ. ಆದರೆ ಈ ನಿಯತಕಾಲಿಕಗಳು ಸಾರ್ವಜನಿಕವಾಗಿ ಲಭ್ಯ ಇರುವಂತವು ಎಂದು ಹೇಳಲಾಗಿದೆ.