ಎಂವಿಎ ಸ್ಥಾನ ಹೊಂದಾಣಿಕೆ ಮಾತುಕತೆ ನನೆಗುದಿಗೆ; ನಾನಾ ಪಟೋಲೆ ಹೊರಗಿಡಲು ಯುಬಿಟಿ ಆಗ್ರಹ
PC: PTI
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ 288 ಸ್ಥಾನಗಳ ಪೈಕಿ 260 ಕ್ಷೇತ್ರಗಳ ಹಂಚಿಕೆಯನ್ನು ವಿರೋಧ ಪಕ್ಷಗಳ ಒಕ್ಕೂಟವಾದ ಮಹಾ ವಿಕಾಸ ಅಗಾಡಿ ಅಂತಿಮಪಡಿಸಿದ್ದರೂ, 28 ಸ್ಥಾನಗಳ ವಿಚಾರದಲ್ಲಿ ಪ್ರಮುಖ ಮೂರು ಘಟಕ ಪಕ್ಷಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ. ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರನ್ನು ಮುಂದಿನ ಸುತ್ತಿನ ಮಾತುಕತೆಯಿಂದ ಹೊರಗಿಡದಿದ್ದರೆ ತಾನು ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಶಿವಸೇನೆ (ಯುಬಿಟಿ) ಬೆದರಿಕೆ ಹಾಕಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋದ ಬೆನ್ನಲ್ಲೇ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಲ, ಈ ಕಗ್ಗಂಟು ಬಿಡಿಸುವ ಸಲುವಾಗಿ ಮುಂಬೈಗೆ ಧಾವಿಸಲಿದ್ದಾರೆ.
"ತೀರಾ ಕಡಿಮೆ ಕಾಲಾವಕಾಶವಿದ್ದು, ಸ್ಥಾನ ಹೊಂದಾಣಿಕೆ ನಿರ್ಧಾರವನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ. ಸ್ಥಾನ ಹೊಂದಾಣಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ರಾಜ್ಯ ನಾಯಕರಿಗೆ ಇಲ್ಲ. ಅವರು ಪಟ್ಟಿಯನ್ನು ದೆಹಲಿಗೆ ಕಳುಹಿಸಬೇಕು. ಆದ್ದರಿಂದ ಕಾಂಗ್ರೆಸ್ ಕೇಂದ್ರೀಯ ನಾಯಕತ್ವದ ಜತೆಗೆ ಚರ್ಚೆ ನಡೆಸುವುದೇ ಸೂಕ್ತ" ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಪಟೋಲೆ, ಮೂರೂ ಪಕ್ಷಗಳ ಮುಖಂಡರು ಸ್ಥಾನ ಹೊಂದಾಣಿಕೆ ಮಾಹಿತಿಯನ್ನು ನಾಯಕತ್ವಕ್ಕೆ ಸಲ್ಲಿಸಬೇಕು. 20ರಂದು ನಡೆಯುವ ಕೇಂದ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ನಮ್ಮ ನಡುವೆ ಅಥವಾ ಎಂವಿಎ ನಡುವೆ ಯಾವುದೇ ವ್ಯಾಜ್ಯ ಇಲ್ಲ.ಈ ಹೇಳಿಕೆಯನ್ನು ರಾವುತ್ ಏಕೆ ನೀಡಿದ್ದಾರೆ ಎನ್ನುವುದು ತಿಳಿಯದು" ಎಂದು ಹೇಳಿದ್ದಾರೆ.