ಎಬಿವಿಪಿ ಸ್ಥಾಪಕ ಸದಸ್ಯನ ಜನ್ಮಶತಮಾನೋತ್ಸವದಲ್ಲಿ ವಿದ್ಯಾರ್ಥಿಗಳ ಭಾಗವಹಿಸಲು ಕೋರಿ ಮಹಾರಾಷ್ಟ್ರ ವಿವಿ, ಕಾಲೇಜುಗಳಿಗೆ ಯುಜಿಸಿ ಪತ್ರ
ಸಾಂದರ್ಭಿಕ ಚಿತ್ರ (PTI)
ಮುಂಬೈ: ಆರೆಸ್ಸೆಸ್ ಮುಖಂಡ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ನ ಸ್ಥಾಪಕ ಸದಸ್ಯ ದತ್ತಾಜಿ ದಿದೋಲ್ಕರ್ ಅವರ ಜನ್ಮಶತಮಾನೋತ್ಸವದ ಆಚರಣೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕೆಂದು ಕೋರಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮಹಾರಾಷ್ಟ್ರದ ಕಾಲೇಜುಗಳು ಮತ್ತು ವಿವಿಗಳ ಮುಖ್ಯಸ್ಥರಿಗೆ ಪತ್ರ ಬರೆದಿದೆ.
ನ. 21ರ ತಾರೀಕು ಹೊಂದಿರುವ ಈ ಪತ್ರದಲ್ಲಿ “ದಿ. ದತ್ತಾಜಿ ದಿದೋಲ್ಕರ್ ಅವರು ಭಾರತದ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಅವರು ಹಲವಾರು ಸಾಮಾಜಿಕ ಮತ್ತು ಇತರ ಸಂಘಟನೆಗಳ ಸ್ಥಾಪಕರಾಗಿದ್ದಾರೆ. ಈ ವರ್ಷ ಅವರ ಜನ್ಮಶತಮಾನೋತ್ಸವ ವರ್ಷವಾಗಿದೆ. ಆಗಸ್ಟ್ 7, 2023ರಿಂದ ಆಗಸ್ಟ್ 7, 2024ರ ತನಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯುವಜನರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕೋರಲಾಗಿದೆ,” ಎಂದು ತಿಳಿಸಲಾಗಿದೆ.
ಕಾರ್ಯಕ್ರಮಗಳ ಕೈಪಿಡಿಯನ್ನೂ ಪತ್ರದೊಂದಿಗೆ ಲಗತ್ತಿಸಲಾಗಿದೆ. ಯುವಜನರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಮತ್ತು ಸ್ಮರಣಸಂಚಿಕೆಯನ್ನು ಪ್ರಕಟಿಸುವುದಾಗಿ ಹೇಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಬರೆದ ಪತ್ರವನ್ನೂ ಉಲ್ಲೇಖಿಸಲಾಗಿದೆ.
ಈ ಪತ್ರಕ್ಕೆ ಶಿವಸೇನೆಯ ಯುವ ಘಟಕವಾದ ಯುವಸೇನೆ ಆಕ್ಷೇಪ ವ್ಯಕ್ತಗಪಡಿಸಿದೆ ಹಾಗೂ ಅದನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದೆ. ಈ ಆಚರಣೆಗೆ ಆಕ್ಷೇಪವಿಲ್ಲ, ಅದನ್ನು ಆರೆಸ್ಸೆಸ್ ಮತ್ತು ರಾಜಕೀಯ ಮುಖಂಡರು ಆಚರಿಸಲಿ. ಆದರೆ ಅದನ್ನು ಕಾಲೇಜುಗಳು, ವಿವಿಗಳ ಮೇಲೆ ಹೇರಬಾರದು ಎಂದು ಯುವಸೇನೆಯ ಮುಖಂಡ ಪ್ರದೀಪ್ ಸಾವಂತ್ ಹೇಳಿದ್ದಾರೆ.