ಏಳು ದಿನಗಳ ಮಧ್ಯಂತರ ಜಾಮೀನಿನ ನಂತರ ಲವಲವಿಕೆಯಿಂದ ಜೈಲಿಗೆ ಮರಳಿದ ಉಮರ್ ಖಾಲಿದ್

Photo | Instagram/@umar_khalid87
ಹೊಸದಿಲ್ಲಿ: 2020ರ ಫೆಬ್ರವರಿ 23-25ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ದಿಲ್ಲಿ ನ್ಯಾಯಾಲಯವೊಂದರಿಂದ ಏಳು ದಿನಗಳ ಮಧ್ಯಂತರ ಜಾಮೀನು ಪಡೆದಿದ್ದ ಸಾಮಾಜಿಕ ಹೋರಾಟಗಾರ ಹಾಗೂ ಜೆಎನ್ ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಶುಕ್ರವಾರ ಲವಲವಿಕೆಯಿಂದ ಜೈಲಿಗೆ ಮರಳಿದ್ದಾರೆ. ಈ ವೇಳೆ ತನ್ನನ್ನು ಬೀಳ್ಕೊಟ್ಟ ಕುಟುಂಬಸ್ಥರಿಗೆ ʼStay strongʼ ಎಂದು ಉಮರ್ ಖಾಲಿದ್ ಹೇಳಿದ್ದಾರೆ.
2020ರಿಂದ ಜೈಲಿನಲ್ಲಿರುವ ಉಮರ್ ಖಾಲಿದ್ ನ್ಯಾಯದ ನಿರೀಕ್ಷೆ ಮತ್ತು ಭರವಸೆಯೊಂದಿಗೆ ಜಾಮೀನು ಮುಗಿಸಿಕೊಂಡು ನಗುಮುಖದಲ್ಲೇ ಮತ್ತೆ ಜೈಲಿಗೆ ವಾಪಾಸ್ಸಾಗಿದ್ದಾರೆ.
2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಭುಗಿಲೆದ್ದ ಗಲಭೆಗೆ ಪೂರ್ವನಿಯೋಜಿತ ಪಿತೂರಿ ನಡೆಸಿದ್ದ ಆರೋಪವನ್ನು ಉಮರ್ ಖಾಲಿದ್ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ತಡೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
2020ರ ಸೆಪ್ಟೆಂಬರ್ ನಲ್ಲಿ ಬಂಧನಕ್ಕೊಳಗಾಗಿದ್ದ ಉಮರ್ ಖಾಲಿದ್ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದರು. ಡಿಸೆಂಬರ್ 28ರಿಂದ ಏಳು ದಿನಗಳ ಕಾಲ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು.
ಜನವರಿ 1ರಂದು ದಿಲ್ಲಿಯ ಅಬುಲ್ ಫಝಲ್ ಎನ್ ಕ್ಲೇವ್ ನಲ್ಲಿರುವ ಇಶಾತ್ ಇಸ್ಲಾಮ್ ಮಸೀದಿಯಲ್ಲಿ ನನ್ನ ಸೋದರ ಸಂಬಂಧಿ ವಿವಾಹವಾಗುತ್ತಿರುವುದರಿಂದ ನನಗೆ ಜಾಮೀನು ಮಂಜೂರು ಮಾಡಬೇಕು ಎಂದು ಉಮರ್ ಖಾಲಿದ್ ದಿಲ್ಲಿಯ ಶಾದಾರ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಉಮರ್ ಖಾಲಿದ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜಪೇಯಿ, 20,000 ರೂ. ವೈಯಕ್ತಿಕ ಬಾಂಡ್ ನೊಂದಿಗೆ ಡಿಸೆಂಬರ್ 28ರ ಬೆಳಗ್ಗೆಯಿಂದ ಜನವರಿ 3, 2025ರ ಸಂಜೆವರೆಗೆ ಜಾಮೀನು ಮಂಜೂರು ಮಾಡಿದ್ದರು.
2020ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ 53 ಮಂದಿ ಮೃತಪಟ್ಟು, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.