ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ನಡೆದಿದ್ದ ಹತ್ಯೆಗಳ ತನಿಖೆ | ಮುಂದಿನ ವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿರುವ ವಿಶ್ವ ಸಂಸ್ಥೆ ತಂಡ
ಸಾಂದರ್ಭಿಕ ಚಿತ್ರ | PC : PTI
ಢಾಕಾ: ಕಳೆದ ವಾರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ ಸಲ್ಲಿಸುವುದಕ್ಕೂ ಮುನ್ನ ಹಾಗೂ ನಂತರ ನಡೆದಿದ್ದ ಪ್ರತಿಭಟನಾಕಾರರ ಹತ್ಯೆಗಳ ಕುರಿತು ತನಿಖೆ ನಡೆಸಲು ಮುಂದಿನ ವಾರ ವಿಶ್ವ ಸಂಸ್ಥೆಯ ತಂಡವೊಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದೆ ಎಂದು ಗುರುವಾರ ವಿಶ್ವಸಂಸ್ಥೆ ಪ್ರಕಟಿಸಿದೆ.
ವಿಶ್ವ ಸಂಸ್ಥೆಯ ಅಧಿಕಾರಿಯೊಬ್ಬರ ಪ್ರಕಾರ, ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಬಂದ 1971ರ ನಂತರ ಇದೇ ಪ್ರಥಮ ಬಾರಿಗೆ ಆ ದೇಶದಲ್ಲಿ ನಡೆದಿರುವ ವ್ಯಾಪಕ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ತನಿಖೆ ನಡೆಸಲು ವಿಶ್ವ ಸಂಸ್ಥೆಯು ಬಾಂಗ್ಲಾದೇಶಕ್ಕೆ ಸತ್ಯಶೋಧನಾ ಕಾರ್ಯಪಡೆಯನ್ನು ಕಳಿಸುತ್ತಿದೆ ಎನ್ನಲಾಗಿದೆ.
ಜುಲೈ ಹಾಗೂ ಈ ತಿಂಗಳ ಆರಂಭದಲ್ಲಿ ನಡೆದಿದ್ದ ವಿದ್ಯಾರ್ಥಿ ಕ್ರಾಂತಿಯ ಸಂದರ್ಭದಲ್ಲಿ ನಡೆದಿದ್ದ ದೌರ್ಜನ್ಯಗಳನ್ನು ತನಿಖೆ ನಡೆಸಲು ವಿಶ್ವ ಸಂಸ್ಥೆಯು ಮುಂದಿನ ವಾರ ಸತ್ಯಶೋಧನಾ ತಂಡವನ್ನು ಬಾಂಗ್ಲಾದೇಶಕ್ಕೆ ಕಳಿಸುತ್ತಿದೆ.
ಬಾಂಗ್ಲಾದೇಶಾದ್ಯಂತ ಉದ್ಯೋಗ ಮೀಸಲಾತಿಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಸ್ಫೋಟಗೊಂಡ ಬೆನ್ನಿಗೇ, ಶೇಕ್ ಹಸೀನಾರ ಸರಕಾರ ಪತನವಾಗಿತ್ತು. ನಂತರ ಆಗಸ್ಟ್ 5ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಶೇಕ್ ಹಸೀನಾ ಭಾರತಕ್ಕೆ ಪರಾರಿಯಾಗಿದ್ದರು.
ಇದಾದ ನಂತರ, ಆಗಸ್ಟ್ 8ರಂದು ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರಾಗಿ ಮುಹಮ್ಮದ್ ಯೂನುಸ್ ಪ್ರಮಾಣ ವಚನ ಸ್ವೀಕರಿಸಿದ್ದರು.