ಮಧ್ಯಪ್ರದೇಶ | ಯೂನಿಯನ್ ಕಾರ್ಬೈಡ್ ತ್ಯಾಜ್ಯ ವಿಲೇವಾರಿಗೆ ವಿರೋಧ: ಇಬ್ಬರು ಪ್ರತಿಭಟನಾಕಾರರು ಆತ್ಮಹತ್ಯೆಗೆ ಯತ್ನ
Photo | hindustantimes
ಭೋಪಾಲ್: ಮಧ್ಯಪ್ರದೇಶದ ಪಿತಾಂಪುರದಲ್ಲಿ 337 ಟನ್ ಯೂನಿಯನ್ ಕಾರ್ಬೈಡ್ ತ್ಯಾಜ್ಯವನ್ನು ವಿಲೇವಾರಿ ವಿರೋಧಿಸಿ ಶುಕ್ರವಾರ ಕರೆ ನೀಡಿದ್ದ ಬಂದ್ ವೇಳೆ ಬೆಂಕಿ ಹಚ್ಚಿಕೊಂಡು ಇಬ್ಬರು ಪ್ರತಿಭಟನಾಕಾರರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೀಥಾಂಪುರ ಕೈಗಾರಿಕಾ ಪಟ್ಟಣವು ಇಂದೋರ್ ನಿಂದ 30 ಕಿ.ಮೀ ದೂರದಲ್ಲಿದೆ. ತ್ಯಾಜ್ಯ ವಿಲೇವಾರಿಯಿಂದ ಸ್ಥಳೀಯ ಜನರು ಹಾಗೂ ಪರಿಸರದ ಮೇಲೆ ತೀವ್ರ ಹಾನಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿ ‘ಪೀಥಾಂಪುರ ಬಚಾವೊ ಸಮಿತಿ’ ಶುಕ್ರವಾರ ಬಂದ್ ಗೆ ಕರೆ ನೀಡಿತ್ತು.
ಬಂದ್ ಕರೆ ಹಿನ್ನೆಲೆ ಪೀಥಾಂಪುರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇನ್ನೊಂದೆಡೆ ತ್ಯಾಜ್ಯ ವಿಲೇವಾರಿ ಖಂಡಿಸಿ ಸ್ಥಳೀಯ ನಿವಾಸಿ ಸಂದೀಪ್ ರಘುವಂಶಿ ಅವರು ಬಸ್ ನಿಲ್ದಾಣದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರಿಗೆ ಹೆಚ್ಚಿನ ಜನರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ವಿರುದ್ಧದ ಪ್ರತಿಭಟನೆಯ ವೇಳೆ ಇಬ್ಬರು ದೇಹದ ಮೇಲೆ ದ್ರವವೊಂದನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇಬ್ಬರು ಪ್ರತಿಭಟನಾಕಾರರು ಅಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪೀಥಾಂಪುರದಲ್ಲಿ ಸರಿಸುಮಾರು 1.75 ಲಕ್ಷ ನಾಗರಿಕರು ವಾಸಿಸುತ್ತಿದ್ದು, ಮೂರು ವಲಯಗಳಲ್ಲಿ 700 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಭೋಪಾಲ್ ದುರಂತ ಸಂಭವಿಸಿ 40 ವರ್ಷ ಕಳೆದಿದ್ದರೂ, ತ್ಯಾಜ್ಯವನ್ನು ವಿಲೇವಾರಿ ಮಾಡದ್ದಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.