ಭಾರತದ ಆಳ ಸಮುದ್ರ ಜಲಾಂತರ್ಗಾಮಿ ಮತ್ಸ್ಯ 6000 ಚಿತ್ರವನ್ನು ಹಂಚಿಕೊಂಡ ಕೇಂದ್ರ ಸಚಿವ
Photo: twitter \ @KirenRijiju
ಹೊಸ ದಿಲ್ಲಿ: ಸಮುದ್ರಯಾನ ಕಾರ್ಯಾಚರಣೆಯ ಭಾಗವಾಗಿ ಸಾಗರ ತಳವನ್ನು ಶೋಧಿಸಲಿರುವ ಮಾನವಸಹಿತ ಮತ್ಸ್ಯ 6000 ಜಲಾಂತರ್ಗಾಮಿ ನೌಕೆಯ ವಿಡಿಯೊ ಮತ್ತು ಚಿತ್ರಗಳನ್ನು ಸೋಮವಾರ ಕೇಂದ್ರ ಸಚಿವ ಕಿರಣ್ ರಿಜಿಜು ಹಂಚಿಕೊಂಡಿದ್ದಾರೆ. ಈ ನೌಕೆಯನ್ನು ಚೆನ್ನೈನ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಒಮ್ಮೆ ನಿಯೋಜಿಸಿದ ನಂತರ ಇದು ಭಾರತದ ಮೊಟ್ಟಮೊದಲ ಮಾನವಸಹಿತ ಸಾಗರ ಶೋಧನೆ ಕಾರ್ಯಾಚರಣೆಯಾಗಲಿದೆ. ಆದರೆ, ಉದ್ಘಾಟನಾ ಸಮುದ್ರದಾಳದ ಪ್ರಯಾಣವು 500 ಮೀಟರ್ ಆಗಿರಲಿದೆ. ಈ ಕಾರ್ಯಾಚರಣೆಯಿಂದ ಸಾಗರದಾಳದ ಜೈವಿಕ ವ್ಯವಸ್ಥೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ರಿಜಿಜು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
“ಇದಾದ ನಂತರ ಸಮುದ್ರಯಾನ ನಡೆಯಲಿದೆ. ಈ ಕಾರ್ಯಾಚರಣೆ ನಡೆಸಲಿರುವುದು ಚೆನ್ನೈನ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮತ್ಸ್ಯ 6000 ಜಲಾಂತರ್ಗಾಮಿ ಆಗಿದೆ. ಆಳ ಸಮುದ್ರದ ಸಂಪನ್ಮೂಲಗಳು ಮತ್ತು ಜೈವಿಕ ವೈವಿಧ್ಯವನ್ನು ಮೌಲ್ಯಮಾಪನ ಮಾಡಲು ಜಲಾಂತರ್ಗಾಮಿಯಲ್ಲಿ ಮೂವರು ವ್ಯಕ್ತಿಗಳನ್ನು 6 ಕಿಮೀ ಆಳದ ಸಾಗರ ತಳಕ್ಕೆ ಕಳಿಸುವ ಯೋಜನೆಯನ್ನು ‘ಸಮುದ್ರಯಾನ’ ಹೊಂದಿದೆ. ಈ ಯೋಜನೆಯಿಂದ ಸಾಗರದ ಜೈವಿಕ ವ್ಯವಸ್ಥೆಗೆ ಯಾವುದೇ ತೊಂದರೆಯಾಗುವುದಿಲ್ಲ” ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
“ಪ್ರಧಾನಿ @narendramodi ಹೊಂದಿರುವ ‘ನೀಲಿ ಆರ್ಥಿಕತೆ’ ದೂರದೃಷ್ಟಿಗೆ ಈ ಆಳ ಸಮುದ್ರ ಕಾರ್ಯಾಚರಣೆಯು ಬೆಂಬಲ ನೀಡಲಿದೆ. ಈ ಕಾರ್ಯಾಚರಣೆಯು ದೇಶದ ಆರ್ಥಿಕ ಪ್ರಗತಿಗೆ ಸಾಗರ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಬಳಸಿಕೊಳ್ಳಲು, ಜೀವನೋಪಾಯ ಹಾಗೂ ಉದ್ಯೋಗಗಳ ಸುಧಾರಣೆ ಹಾಗೂ ಸಾಗರ ಜೈವಿಕ ವ್ಯವಸ್ಥೆಯ ಆರೋಗ್ಯವನ್ನು ಉತ್ತೇಜಿಸಲು ನೆರವು ನೀಡಲಿದೆ” ಎಂದೂ ರಿಜಿಜು ತಿಳಿಸಿದ್ದಾರೆ.
ಪೋಸ್ಟ್ ಮಾಡಿರುವ ವಿಡಿಯೊದಲ್ಲಿ, ಇನ್ನೂ ನಿರ್ಮಾಣ ಹಂತದಲ್ಲಿರುವ ನೌಕೆಯಲ್ಲಿ ಸಚಿವ ಕಿರಣ್ ರಿಜಿಜು ಕುಳಿತಿರುವುದನ್ನು ನೋಡಬಹುದಾಗಿದೆ. ಮತ್ಸ್ಯ 6000 ಹಾಗೂ ಅದು ಹೇಗೆ ಕಾರ್ಯಾಚರಿಸುತ್ತದೆ ಎಂಬುದನ್ನು ಕುರಿತು ತಜ್ಞರೊಬ್ಬರು ರಿಜಿಜು ಅವರಿಗೆ ವಿವರಿಸುತ್ತಿರುವುದು ಸೆರೆಯಾಗಿದೆ.
ಸಮುದ್ರಯಾನವು ಖನಿಜದಂಥ ಸಂಪನ್ಮೂಲಗಳನ್ನು ಸಾಗರದಡಿ ಶೋಧಿಸಲಿದೆ. ಈ ವರ್ಷದ ಆರಂಭದಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ್ದ ಲಿಖಿತ ಉತ್ತರದಲ್ಲಿ, 2026ರ ವೇಳೆಗೆ ಈ ಕಾರ್ಯಾಚರಣೆಯು ಕಾರ್ಯಗತವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಭೂ ವಿಜ್ಞಾನಗಳ ರಾಜ್ಯ (ಸ್ವತಂತ್ರ ನಿರ್ವಹಣೆ) ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದರು.