ಲಡಾಖ್ ಬೈಕ್ ಸವಾರಿ ಮಾಡಿದ ರಾಹುಲ್ ಗಾಂಧಿಗೆ ಧನ್ಯವಾದ ಹೇಳುತ್ತಿರುವ ಬಿಜೆಪಿ ನಾಯಕರು; ಕಾರಣ ಇಲ್ಲಿದೆ
ಹೊಸದಿಲ್ಲಿ: ರಾಹುಲ್ ಗಾಂಧಿ ಲಡಾಖ್ ನಲ್ಲಿನ ತಮ್ಮ ಮೋಟರ್ ಬೈಕ್ ಸವಾರಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಬೆನ್ನಿಗೇ, ನರೇಂದ್ರ ಮೋದಿ ನಾಯಕತ್ವದಲ್ಲಿ ಹಿಮಾಲಯ ಪ್ರಾಂತ್ಯದಲ್ಲಿ ನಿರ್ಮಿಸಲಾಗಿರುವ ಅತ್ಯುತ್ತಮ ರಸ್ತೆಗಳನ್ನು ಪ್ರಚಾರ ಮಾಡುತ್ತಿದ್ದೀರಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ರಾಹುಲ್ ಗಾಂಧಿಗೆ ಧನ್ಯವಾದ ಹೇಳಿದ್ದಾರೆ.
ರಿಜಿಜು ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ 2012ನೇ ಇಸವಿಯದ್ದು ಎಂದು ಪ್ರತಿಪಾದಿಸಿರುವ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಲಡಾಖ್ ನಲ್ಲಿನ ಪ್ಯಾಂಗಾಗ್ ಸೋಗೆ ತೆರಳುವ ತಾತ್ಕಾಲಿಕ ರಸ್ತೆಯ ತುಂಬ ಕಲ್ಲುಗಳು ಹಾಗೂ ಬಂಡೆಗಳಿದ್ದು, ಎಸ್‍ಯುವಿ ಕಾರುಗಳು ಆ ರಸ್ತೆಯಲ್ಲಿ ಸಾಗಲು ಪರದಾಡುತ್ತಿರುವುದನ್ನು ಅದರಲ್ಲಿ ಕಾಣಬಹುದಾಗಿದೆ.
ಭೂವಿಜ್ಞಾನಗಳ ಸಚಿವರೂ ಕೂಡಾ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನಾಚರಣೆಯ ಅಂಗವಾಗಿ ರವಿವಾರ ಏರ್ಪಡಿಸಲಾಗಿರುವ ಪ್ರಾರ್ಥನಾ ಸಭೆಗೆ ರಾಹುಲ್ ಗಾಂಧಿ ಅವರು ನುಣುಪಾದ ಕಪ್ಪು ರಸ್ತೆಯ ಮೇಲೆ ಪ್ಯಾಂಗಾಂಗ್ ಸೋಗೆ ತೆರಳುತ್ತಿರುವುದನ್ನು ನೋಡಬಹುದಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, “370ನೇ ವಿಧಿ ರದ್ದತಿ ನಂತರ ಲೇಹ್ ಹಾಗೂ ಲಡಾಖ್‍ನಲ್ಲಿ ಆಗಿರುವ ಅಭಿವೃದ್ಧಿಗಳಿಗೆ ಸಾಕ್ಷಿಯಾಗಲು ಮತ್ತು ಅದನ್ನು ಇಡೀ ವಿಶ್ವಕ್ಕೇ ಸಾರಲು ಸ್ವತಃ ರಾಹುಲ್ ಗಾಂಧಿ ಕಣಿವೆ ರಾಜ್ಯಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅವರ ರಸ್ತೆ ಪ್ರವಾಸದ ತುಣುಕುಗಳನ್ನು ನೋಡಿ ನಾವು ಹೆಮ್ಮೆಗೊಂಡಿದ್ದೇವೆ ಮತ್ತು ರೋಮಾಂಚಿತರಾಗಿದ್ದೇವೆ” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಆಗಸ್ಟ್ 2019ರಲ್ಲಿ ಜಮ್ಮು-ಕಾಶ್ಮೀರ ರಾಜ್ಯವನ್ನು ವಿಭಜಿಸಿ ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿಸಿದ ನಂತರ ರಾಹುಲ್ ಗಾಂಧಿ ಇದೇ ಪ್ರಥಮ ಬಾರಿಗೆ ಲಡಾಖ್ ಪ್ರವಾಸ ಕೈಗೊಂಡಿದ್ದಾರೆ. ಅವರು ಮುಂದಿನ ವಾರ ಕಾರ್ಗಿಲ್ ಗೆ ಭೇಟಿ ನೀಡುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.