ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೆಸೆಯಲು ಒಗ್ಗಟ್ಟಾಗಿ: ಕಾಂಗ್ರೆಸ್ ನಾಯಕರಿಗೆ ಖರ್ಗೆ ಕರೆ
ಹೈದರಾಬಾದ್: ಒಗ್ಗಟ್ಟು ಹಾಗೂ ಸಂಘಟನಾತ್ಮಕ ಶಿಸ್ತಿಗೆ ಒತ್ತು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಪಕ್ಷದ ಯಶಸ್ಸನ್ನು ಆದ್ಯತೆಯಾಗಿಸಿಕೊಳ್ಳಬೇಕು ಎಂದು ಪಕ್ಷದ ನಾಯಕರಿಗೆ ರವಿವಾರ ಕರೆ ನೀಡಿದ್ದಾರೆ. ಇದರೊಂದಿಗೆ ಮುಂಬರುವ ರಾಜ್ಯ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಎದುರಾಗಲಿರುವ ಪ್ರತಿಕೂಲ ಪರಿಣಾಮಗಳನ್ನು ಸಂಪೂರ್ಣ ಇಚ್ಛಾಶಕ್ತಿಯೊಂದಿಗೆ ಹಿಮ್ಮೆಟ್ಟಿಸಬೇಕು ಎಂದೂ ಅವರು ಕಿವಿಮಾತು ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ವಿಸ್ತರಿತ ಎರಡನೇ ದಿನದ ಚರ್ಚೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸುವುದು ಹಾಗೂ ದೇಶದಲ್ಲಿ ಪರ್ಯಾಯ ಸರ್ಕಾರವನ್ನು ರಚಿಸಲು ಶ್ರದ್ಧೆಯಿಂದ ಕೆಲಸ ಮಾಡುವುದು ಪಕ್ಷದ ಗುರಿಯಾಗಬೇಕು ಎಂದು ಕರೆ ನೀಡಿದ್ದಾರೆ.
ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, ಮೋದಿ ಸರ್ಕಾರವು ಹೊಸ ವಿಷಯಗಳನ್ನು ಮುನ್ನೆಲೆಗೆ ತರುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ, ದಾರಿ ತಪ್ಪಿಸುವ ರಾಜಕೀಯ ಆಟವಾಡುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
“ಇತ್ತೀಚೆಗೆ ಮುಂಬೈನಲ್ಲಿ INDIA ಮೈತ್ರಿಕೂಟದ ಸಭೆಯ ಸಂದರ್ಭದಲ್ಲಿ ಮೋದಿ ಸರ್ಕಾರವು ‘ಒಂದು ದೇಶ, ಒಂದು ಚುನಾವಣೆ’ ಕುರಿತು ವರದಿ ನೀಡಲು ಸಮಿತಿಯೊಂದನ್ನು ರಚಿಸಿತು. ಎಲ್ಲ ಆಯಾಮಗಳಿಂದಲೂ ವಿವಾದಾತ್ಮಕವಾಗಿರುವ ಈ ಕಾರ್ಯಸೂಚಿಯನ್ನು ಪೂರೈಸಿಕೊಳ್ಳಲು ಮಾಜಿ ರಾಷ್ಟ್ರಪತಿಯನ್ನೂ ಸಮಿತಿಗೆ ಸೇರ್ಪಡೆ ಮಾಡಿದೆ” ಎಂದು ಖರ್ಗೆ ಆರೋಪಿಸಿದ್ದಾರೆ.
ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಲು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಪಕ್ಷದ ನಾಯಕರು ಒಗ್ಗಟ್ಟಾಗಬೇಕು ಎಂದು ಖರ್ಗೆ ಒತ್ತಿ ಹೇಳಿದ್ದಾರೆ.
2024ಕ್ಕೆ ಮಹಾತ್ಮ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಒಂದು ಶತಮಾನವಾಗಲಿದ್ದು, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದೇ ಗಾಂಧೀಜಿಗೆ ನೀಡುವ ಅತ್ಯುತ್ತಮ ಗೌರವವಾಗಲಿದೆ ಎಂದೂ ಖರ್ಗೆ ಪ್ರತಿಪಾದಿಸಿದ್ದಾರೆ.