ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ; ಸಶಸ್ತ್ರ ದಾಳಿಗೆ ಮತ್ತೆರಡು ಬಲಿ
ತೆಂಗ್ನೋಪಾಲ್: ಮಣಿಪುರದ ತೆಂಗ್ನೋಪಾಲ್ ಜಿಲ್ಲೆಯ ಪಲ್ಲೇಲ್ ಪಟ್ಟಣದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಐದನೇ ಬಾರಿಗೆ ಸಶಸ್ತ್ರ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಸೇನಾ ಕಾರ್ಯಾಚರಣೆ ವಿರುದ್ಧ ನಾಗರಿಕರ ಪ್ರತೀಕಾರದ ದಾಳಿ, ಅರಾಜಕತೆ ಮತ್ತು ಸಂಘರ್ಷದಲ್ಲಿ ಸೇನೆಯ ಅಧಿಕಾರಿ ಸೇರಿದಂತೆ 48 ಮಂದಿ ಗಾಯಗೊಂಡಿದ್ದಾರೆ.
ಈ ಹಿಂಸಾಚಾರ ನಡೆದ ಕೆಲವೇ ಗಂಟೆಗಳಲ್ಲಿ ಜಿಲ್ಲಾಡಳಿತ 1500 ಮಂದಿ ಆದಿವಾಸಿ ಮಹಿಳೆಯರು ಮತ್ತು ಮಕ್ಕಳನ್ನು ಭಾರತ- ಮ್ಯಾನ್ಮಾರ್ ಗಡಿಯ ಮೊರೆಹ್ ಪ್ರದೇಶಕ್ಕೆ ಸ್ಥಳಾಂತರಿಸಿದೆ.
ಮೊದಲ ಗುಂಡಿನ ದಾಳಿ ಮುಂಜಾನೆ 4ರ ಸುಮಾರಿಗೆ ನಡೆದಿದ್ದು, 15ಕ್ಕೂ ಹೆಚ್ಚು ವಾಹನಗಳಲ್ಲಿ ಚಂಡೇಲ್ ಬದಿಯಿಂದ ಆಗಮಿಸಿದ 50 ಮಂದಿ ಸಶಸ್ತ್ರಧಾರಿಗಳು ಮೊಲ್ನೋಯ್, ಕೊತ್ಲೆಂಫಾಯಿ ಮತ್ತು ಮುಂಜಂಗ್ ಎಂಬ ಮೂರು ಗ್ರಾಮಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರು. ಈ ಗ್ರಾಮಗಳಲ್ಲಿ ಪಕ್ಲೊಹೆನ್ ಹೊಕಿಪ್ (32) ಎಂಬಾತ ದಾಳಿ ವೇಳೆ ಪ್ರಾಣ ಕಳೆದುಕೊಂಡಿದ್ದಾನೆ.
ಸ್ಥಳಕ್ಕೆ ಭದ್ರತಾ ಪಡೆಗಳು ಆಗಮಿಸಿದಾಗ ನಡೆದ ಚಕಮಕಿಯಲ್ಲಿ ಸೇನೆಯ ಅಧಿಕಾರಿಯೊಬ್ಬರು ಗಾಯಗೊಂಡರು. ದಾಳಿಯ ಸ್ಥಳಕ್ಕೆ ಆಗಮಿಸುವ ಭದ್ರತಾ ಪಡೆಗಳನ್ನು ತಡೆಯಲು ಮಹಿಳೆಯರೇ ಮುಂಚೂಣಿಯಲ್ಲಿದ್ದ ಗ್ರಾಮಸ್ಥರ ತಂಡಗಳು ಭದ್ರತಾ ಪಡೆಗಳ ಜತೆ ಸಂಘರ್ಷಕ್ಕೆ ಇಳಿದವು. ಈ ಸಂಘರ್ಷದಲ್ಲಿ ಯೆಂಗ್ ಕ್ಹೋಮ್ ಜಿತೆನ್ (48) ಎಂಬ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾನೆ. ಗುಂಪನ್ನು ಚದುರಿಸಲು ಅಶ್ರುವಾಯು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದಾಗ ಐದು ಮಂದಿ ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ 47 ಮಂದಿ ಗಾಯಗೊಂಡರು.