ಉತ್ತರ ಪ್ರದೇಶ | ಅಜಾಗರೂಕತೆಯಿಂದ ಕಾರು ಚಲಾಯಿಸಿದ್ದಕ್ಕೆ ಆಕ್ಷೇಪಿಸಿದ ದಲಿತ ಮಹಿಳೆಯ ಹತ್ಯೆ: ನಾಲ್ವರ ಬಂಧನ

Photo: Google
ಲಕ್ನೊ: ಅಜಾಗರೂಕ ಚಾಲನೆಯನ್ನು ಆಕ್ಷೇಪಿಸಿದ ದಲಿತ ಮಹಿಳೆಯೊಬ್ಬರ ಮೇಲೆ ಕೆಲ ಪುಂಡರು ಕಾರು ಹರಿಸಿ ಹತ್ಯೆ ಮಾಡಿದ ಘಟನೆ ಬುಲಂದ್ ಶಹರ್ನಲ್ಲಿ ನಡೆದಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಶುಕ್ರವಾರ The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಂಗಳವಾರ ನಡೆದಿದ್ದ ಈ ಘಟನೆಯಲ್ಲಿ ಶೀಲಾ ದೇವಿ ಎಂಬ ದಲಿತ ಮಹಿಳೆ ಮೃತಪಟ್ಟು, ನಾಲ್ವರು ಗಾಯಗೊಂಡಿದ್ದರು.
ಠಾಕೂರ್ ಸಮುದಾಯಕ್ಕೆ ಸೇರಿದ ಯುವಕರ ಗುಂಪೊಂದು ಕಾರಿನಲ್ಲಿ ಅತಿ ವೇಗವಾಗಿ ತಮ್ಮನ್ನು ದಾಟಿಕೊಂಡು ಹೋದಾಗ ಸಂತ್ರಸ್ತ ದಲಿತ ಕುಟುಂಬದ ಸದಸ್ಯರು ಮನೆಯ ಹೊರಗೆ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು The Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ 62 ವರ್ಷದ ಮೃತ ಮಹಿಳೆಯ ಪುತ್ರ ಭೂಪೇಂದ್ರ ಕುಮಾರ್, "ವಿದ್ಯುತ್ ಸಂಪರ್ಕ ಇಲ್ಲದೆ ಇದ್ದುದರಿಂದ, ನಮ್ನ ಕುಟುಂಬವು ಮನೆಯ ಹೊರಗೆ ವಿಶ್ರಾಂತಿ ಪಡೆಯುತ್ತಿತ್ತು. ನಾವು ರಸ್ತೆಯ ಮಧ್ಯದಲ್ಲೇನೂ ಇರಲಿಲ್ಲ" ಎಂದು ತಿಳಿಸಿದ್ದಾರೆ.
ಕಾರೊಂದು ತೀರಾ ಸನಿಹದಲ್ಲಿ ಹಾದು ಹೋದಾಗ ನನ್ನ ತಾಯಿ ಹಾಗೂ ನನ್ನ ಕುಟುಂಬದ ಇನ್ನಿತರ ಮೂವರು ಸದಸ್ಯರು ನಮ್ಮ ಮನೆಯ ಹೊರಗೆ ಕುಳಿತಿದ್ದರು. ಈ ವೇಳೆ ಕಾರು ನಮ್ಮ ಪಾದಗಳು ಹಾಗೂ ರಸ್ತೆಯ ಮೇಲಿದ್ದ ನಮ್ಮ ಜಾನುವಾರುಗಳ ಸನಿಹವೇ ಹಾದು ಹೋಗಿತ್ತು ಎಂದು ಅವರು ಹೇಳಿದ್ದಾರೆ.
ಈ ವೇಳೆ ನಾನು, ಕಾರನ್ನು ಇನ್ನಷ್ಟು ನಿಧಾನಕ್ಕೆ ಚಲಾಯಿಸುವಂತೆ ಕಾರಿನ ಚಾಲಕನಿಗೆ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಆಗ ತಮ್ಮ ಕಾರನ್ನು ನಿಲ್ಲಿಸಿರುವ ಇಬ್ಬರು ಯುವಕರು, ಭೂಪೇಂದ್ರ ಕುಮಾರ್ ವಿರುದ್ಧ ಜಾತಿ ನಿಂದನೆ ಬೈಗುಳಗಳನ್ನು ಬಳಸಿದ್ದಾರೆ. ಈ ವೇಳೆ ಕೊಂಚ ಹೊತ್ತು ವಾಗ್ವಾದ ನಡೆದ ನಂತರ, ಅವರು ಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ವರದಿಯಾಗಿದೆ.
ಬಳಿಕ ಆಯುಧಗಳನ್ನು ಹಿಡಿದುಕೊಂಡು ತಮ್ಮ ಕಾರಿನಲ್ಲಿ ಘಟನಾ ಸ್ಥಳಕ್ಕೆ ಬಂದಿರುವ ಆರು ಮಂದಿ ದುಷ್ಕರ್ಮಿಗಳು, ಘಟನಾ ಸ್ಥಳದಲ್ಲಿ ನೆರೆದಿದ್ದ ಜನರ ಮೇಲೆ ಕಾರು ಹರಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
"ಅವರು ವೇಗವಾಗಿ ನನ್ನ ತಾಯಿಯ ಮೇಲೆ ಕಾರು ಚಲಾಯಿಸಿದರು. ಅದೇ ವೇಗದಲ್ಲಿ ಮತ್ತೆ ಆಕೆಯ ಮೇಲೆ ಹಿಂದಕ್ಕೆ ಚಲಾಯಿಸಿದರು" ಎಂದು ಭೂಪೇಂದ್ರ ಕುಮಾರ್ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.
ಈ ವೇಳೆ, ಭೂಪೇಂದ್ರ ಕುಮಾರ್ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ಭೂಪೇಂದ್ರ ಕುಮಾರ್ ಹಾಗೂ ಅವರ ಕುಟುಂಬದ ಇನ್ನಿತರ ಮೂವರು ಸದಸ್ಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಈ ಸಂಬಂಧ, ಮಂಗಳವಾರ ರಾತ್ರಿ ಕಾರಿನ ಚಾಲಕ ಪ್ರಿಯಾಂಶು ಠಾಕೂರ್ ಹಾಗೂ ಅತುಲ್ ಠಾಕೂರ್ರನ್ನು ಪೊಲೀಸರು ಬಂಧಿಸಿದ್ದರು. ಮರುದಿನ ಕೃಷ್ಣ ಠಾಕೂರ್ ಹಾಗೂ ಮಾನವ್ ಠಾಕೂರ್ ಎಂಬ ಆರೋಪಿಗಳನ್ನು ಬಂಧಿಸಿದ್ದರು. ಇನ್ನೂ ಮೂವರು ಶಂಕಿತ ಆರೋಪಿಗಳಾದ ತಪೇಶ್ ಠಾಕೂರ್, ವರುಣ್ ಸಿಂಗ್ ಹಾಗೂ ಅಶು ಎಂಬುವವರು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬುಲಂದ್ಶಹರ್ (ನಗರ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಪ್ರಸಾದ್, ಆರೋಪಿಗಳ ವಿರುದ್ಧ ಹತ್ಯೆ, ಕ್ರಿಮಿನಲ್ ಬೆದರಿಕೆ ಹಾಗೂ ಗಲಭೆಯೆಸಗಿದ ಆರೋಪಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.