ಸುಪ್ರೀಂ ಕೋರ್ಟ್ : ತನ್ನದೇ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಹಾಜರಾಗಿ, "ನಾನು ಬದುಕಿದ್ದೇನೆ" ಎಂದ ಬಾಲಕ!
ಅಲಹಾಬಾದ್ ಹೈಕೋರ್ಟ್ ಪೀಠದಲ್ಲಿ ವಜಾಗೊಂಡಿದ್ದ ಅರ್ಜಿಗೆ ʼಸುಪ್ರೀಂʼ ಮಾನ್ಯತೆ
ಪಿಲಿಭಿತ್: ತನ್ನದೇ ಕೊಲೆ ಪ್ರಕರಣದ ವಿಚಾರಣೆ ಸಂದರ್ಭ 11 ವರ್ಷದ ಬಾಲಕನೊಬ್ಬ ತಾನು ಜೀವಂತವಾಗಿದ್ದಾನೆ ಸುಪ್ರೀಂ ಕೋರ್ಟ್ ಮುಂದೆ ಹಾಜರಾದ ಅಚ್ಚರಿಯ ಘಟನೆ ವರದಿಯಾಗಿದೆ ಎಂದು ndtv ವರದಿ ಮಾಡಿದೆ.
ಕೊಲೆ ಪ್ರಕರಣ ನಕಲಿ ಎಂದು ನ್ಯಾಯಾಲಯಕ್ಕೆ ತಿಳಿಸಲು ಬಾಲಕ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾಗಿದ್ದಾನೆ. ಬಾಲಕನ ತಂದೆ, ಅಜ್ಜ ಮತ್ತು ಚಿಕ್ಕಪ್ಪ ಬಾಲಕನನ್ನು ಕೊಂದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದಾಗ ಪ್ರಕರಣ ಪ್ರಾರಂಭವಾಗಿತ್ತು. ಈ ಬಗ್ಗೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಹುಡುಗ ಅಭಯ್ ಸಿಂಗ್, ಪ್ರಕರಣವನ್ನು ನಕಲಿ ಎಂದು ತಿಳಿಸಲು ಮತ್ತು ತಾನು ಜೀವಂತವಾಗಿದ್ದೇನೆ ಎಂದು ಸಾಬೀತುಪಡಿಸಲು ನ್ಯಾಯಪೀಠದ ಕದ ತಟ್ಟಿದ್ದಾನೆ. ಈ ಮೊದಲು, ಅಲಹಾಬಾದ್ ಹೈಕೋರ್ಟ್ ಪೀಠದ ಮುಂದೆ ಹಾಜರಾಗಿದ್ದನು. ಆದರೆ ಅಲ್ಲಿ ಅರ್ಜಿ ವಜಾಗೊಳಿಸಲಾಗಿತ್ತು. ಇದರಿಂದಾಗಿ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಶುಕ್ರವಾರ ಬಾಲಕ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ನಿಂತು "ನಾನು ಬದುಕಿದ್ದೇನೆ" ಎಂದು ಹೇಳಿದನು. ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯವು ಉತ್ತರ ಪ್ರದೇಶ ಸರ್ಕಾರ, ಪಿಲಿಭಿತ್ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನ್ಯೂರಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿಯಿಂದ ವರದಿಯನ್ನು ಕೇಳಿದೆ.
ಮುಂದಿನ ಆದೇಶದವರೆಗೆ ಬಾಲಕ ಮತ್ತು ಅತನ ಅಜ್ಜನ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನ್ಯಾಯಾಲಯವು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಅಭಯ್, " ನಾನು ನನ್ನ ಅಜ್ಜಿಯೊಂದಿಗಿದ್ದೇನೆ. ಅವರೊಂದಿಗೆ ನಾನು ಸುರಕ್ಷಿತವಾಗಿರುತ್ತೇನೆ. ಪೊಲೀಸರು ನಮ್ಮ ಮನೆಗೆ ಬಂದು, ನನ್ನ ಅಜ್ಜ-ಅಜ್ಜಿಗೆ ಬೆದರಿಕೆ ಹಾಕುತ್ತಿರುತ್ತಾರೆ" ಎಂದು ತನ್ನ ಇಂಗಿತ ವ್ಯಕ್ತಪಡಿಸಿದ್ದಾನೆ.
ಬಾಲಕನ ವಕೀಲ ಕುಲದೀಪ್ ಜೌಹಾರಿ ಮಾತನಾಡಿ, "ಬಾಲಕನ ತಂದೆ, ಆತನ ತಾಯಿಯನ್ನು ಹೊಡೆಯುತ್ತಿದ್ದರು. ಹೆಚ್ಚಿನ ವರದಕ್ಷಿಣೆಗೆ ಪೀಡಿಸುತ್ತಿದ್ದರು. ಹೀಗಾಗಿ ಬಾಲಕ 2013 ರಿಂದ ತನ್ನ ತಾಯಿಯ ತವರು ಮನೆಯಲ್ಲಿ ವಾಸಿಸುತ್ತಿದ್ದ", ಎಂದರು.
"ಬಾಲಕನ ತಾಯಿ ತೀರಿಕೊಂಡ ನಂತರ ಅವನ ತಂದೆ, ಅಜ್ಜನ ವಿರುದ್ಧ ಪ್ರಕರಣ ದಾಖಲಿಸಿ ಬಾಲಕನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು", ಎಂದು ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಜನವರಿಯಲ್ಲಿ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆ ನಡೆಸಲಿದೆ.