ಸಿಎಎ ಮುಸ್ಲಿಮರನ್ನು ಹೊರಗಿಟ್ಟಿದೆ, ಧರ್ಮ, ನಂಬಿಕೆ ಆಧಾರದಲ್ಲಿ ಯಾರಿಗೂ ಪೌರತ್ವ ನಿರಾಕರಿಸಬಾರದು: ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ನಿಯಮಗಳ ಕುರಿತು ಭಾರತ ಸರ್ಕಾರ ಹೊರಡಿಸಿದ ಅಧಿಸೂಚನೆ ಕುರಿತು ತನ್ನ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ(ಯುಎಸ್ಸಿಐಆರ್ಎಫ್), ಯಾರಿಗೂ ಧರ್ಮ ಅಥವಾ ನಂಬಿಕೆಯ ಆಧಾರದಲ್ಲಿ ಪೌರತ್ವವನ್ನು ನಿರಾಕರಿಸಬಾರದು ಎಂದು ಹೇಳಿದೆ. ಈ ಕಾನೂನು ನೆರೆಯ ದೇಶಗಳ ಹಿಂದುಗಳು ಪಾರ್ಸಿಗಳು, ಸಿಖ್ಖರು, ಬೌದ್ಧ ಧರ್ಮೀಯರು, ಜೈನರು ಮತ್ತು ಕ್ರೈಸ್ತರಿಗೆ ತ್ವರಿತವಾಗಿ ಪೌರತ್ವ ಒದಗಿಸುವುದಾದರೆ ಅದು ಮುಸ್ಲಿಮರನ್ನು ಹೊರಗಿಟ್ಟಿದೆ ಎಂದು ಆಯೋಗ ಹೇಳಿದೆ.
“ಭಾರತದಲ್ಲಿ ಪೌರತ್ವ ಮತ್ತು ಆಶ್ರಯ ಬಯಸುವವರಿಗೆ ಧಾರ್ಮಿಕ ಅಗತ್ಯತೆ ಇರುವುದು ಸಿಎಎಗೆ ಬೇಕಿದೆ,” ಎಂದು ಆಯೋಗದ ಆಯುಕ್ತ ಸ್ಟೀಫನ್ ಶೆನೆಕ್ ಹೇಳಿದ್ದಾರೆ.
“ಈ ಕಾನೂನು ಶೋಷಿತ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವ ನಿಜವಾದ ಉದ್ದೇಶ ಹೊಂದಿದ್ದರೆ ಅದು ಬರ್ಮಾದ ರೋಹಿಂಗ್ಯ ಮುಸ್ಲಿಮರು, ಪಾಕಿಸ್ತಾನದ ಅಹ್ಮದಿಯಾ ಮುಸ್ಲಿಮರು, ಅಫ್ಗಾನಿಸ್ತಾನದ ಹಝಾರ ಶಿಯಾ ಮುಂತಾದವರನ್ನು ಒಳಗೊಂಡಿರುತ್ತಿತ್ತು. ಧರ್ಮ ಅಥವಾ ನಂಬಿಕೆ ಆಧಾರದಲ್ಲಿ ಯಾರಿಗೂ ಪೌರತ್ವ ನಿರಾಕರಿಸಬಾರದು,” ಎಂದು ಅವರು ಹೇಳಿದರು.