ಮಾಸ್ಕೋ ದಾಳಿಯ ಹಿಂದೆ ಉಕ್ರೇನ್ ಶಾಮೀಲಾತಿ ಕುರಿತ ಮಾಹಿತಿ ಅಮೆರಿಕಾ ಮುಚ್ಚಿಟ್ಟಿದೆ: ರಷ್ಯಾ ಆರೋಪ
Photo: X \ @den_kazansky
ಮಾಸ್ಕೋ: ಮಾಸ್ಕೋದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 60ಕ್ಕೂ ಅಧಿಕ ಮಂದಿ ಬಲಿಯಾದ ದುರ್ಘಟನೆಯ ಬೆನ್ನಲ್ಲೇ ಈ ದಾಳಿಯಲ್ಲಿ ಉಕ್ರೇನಿಯನ್ನರ ಶಾಮೀಲಾತಿ ಕುರಿತ ಮಾಹಿತಿಯನ್ನು ಅಮೆರಿಕ ಮುಚ್ಚಿಟ್ಟಿದೆ ಎಂದು ರಷ್ಯಾ ಆರೋಪಿಸಿದೆ.
ಮಾಸ್ಕೋದಲ್ಲಿನ ದಾಳಿಯ ಹಿಂದೆ ಉಕ್ರೇನ್ ಇರಬಹುದೇ ಎಂಬ ಕುರಿತು ತನಗೆ ಯಾವುದೇ ಆರಂಭಿಕ ಸುಳಿವು ಇಲ್ಲ ಎಂದು ಶ್ವೇತ ಭವನದಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಜಾನ್ ಕಿರ್ಬಿ ಶುಕ್ರವಾರ ಹೇಳಿದ ನಂತರ ರಷ್ಯಾದ ಪ್ರತಿಕ್ರಿಯೆ ಬಂದಿದೆ.
ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಝಕರೋವಾ ಮಾತನಾಡಿ “ಮಾಸ್ಕೋ ಉಗ್ರ ದಾಳಿಯಲ್ಲಿ ಉಕ್ರೇನ್ ಅಥವಾ ಉಕ್ರೇನಿಯನ್ನರ ಶಾಮೀಲಾತಿಯ ಸುಳಿವು ಇಲ್ಲ ಎಂದು ಶ್ವೇತ ಭವನ ಹೇಳುತ್ತಿದೆ. ಒಂದು ದುರಂತದ ನಡುವೆ ಅಮೆರಿಕಾ ಯಾವ ಆಧಾರದಲ್ಲಿ ಇಂತಹ ಮಾತುಗಳನ್ನಾಡುತ್ತಿದೆ. ಅಮೆರಿಕಾಗೆ ಈ ದಾಳಿ ಕುರಿತು ಯಾವುದೇ ವಿಶ್ವಾಸಾರ್ಹ ಮಾಹಿತಿ ಇದ್ದರೆ ಅದನ್ನು ತಕ್ಷಣ ರಷ್ಯಾಗೆ ನೀಡಬೇಕು,” ಎಂದು ಹೇಳಿದರು.
“ಅಂತಹ ಮಾಹಿತಿ ಇಲ್ಲದೇ ಇದ್ದಲ್ಲಿ, ಶ್ವೇತ ಭವನಕ್ಕೆ ಈ ರೀತಿ ಮಾತನಾಡುವ ಯಾವುದೇ ಹಕ್ಕಿಲ್ಲ, ಯಾರೇ ಶಾಮೀಲಾಗಿದ್ದರೂ ರಷ್ಯಾದ ನಾಯಕತ್ವ ಅವರನ್ನು ಗುರುತಿಸಲಿದೆ,” ಎಂದು ಅವರು ಟ್ವೀಟ್ ಮಾಡಿದ್ದಾರೆ.