ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಜೊತೆ ಅಮೆರಿಕ ರಹಸ್ಯ ಮಾತುಕತೆ: ವರದಿ

Photo | PTI
ವಾಶಿಂಗ್ಟನ್ : ಹಮಾಸ್ ವಶದಲ್ಲಿರುವ ಅಮೆರಿಕದ ಒತ್ತೆಯಾಳುಗಳ ಬಿಡುಗಡೆ ಮತ್ತು ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ಸರಕಾರ ಹಮಾಸ್ ಜೊತೆ ರಹಸ್ಯ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
Axios ವರದಿಯ ಪ್ರಕಾರ, ಅಮೆರಿಕದ ಒತ್ತೆಯಾಳು ವ್ಯವಹಾರಗಳ ಇಲಾಖೆಯ ವಿಶೇಷ ರಾಯಭಾರಿ ಆಡಮ್ ಬೋಹ್ಲರ್ ದೋಹಾದಲ್ಲಿ ಯುಎಸ್ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿ ಹಮಾಸ್ ಜೊತೆ ನೇರ ಮಾತುಕತೆ ನಡೆಸುತ್ತಿದ್ದಾರೆ. ಹಮಾಸ್ ಜೊತೆ ಈವರೆಗೆ ಅಮೆರಿಕ ನೇರವಾಗಿ ಮಾತುಕತೆಯನ್ನು ನಡೆಸಿಲ್ಲ. ಆದ್ದರಿಂದ ಈ ಬೆಳವಣಿಗೆ ಮಹತ್ವಪೂರ್ಣವಾಗಿದೆ.
ಮಾತುಕತೆಯು ಮುಖ್ಯವಾಗಿ ಅಮೆರಿಕನ್ ಒತ್ತೆಯಾಳುಗಳ ಬಿಡುಗಡೆ ಮೇಲೆ ಕೇಂದ್ರೀಕರಿಸಿದೆ. ಉಳಿದಂತೆ ಎಲ್ಲಾ ಒತ್ತೆಯಾಳುಗಳ ಬಿಡುಗಡೆ, ದೀರ್ಘಾವಧಿಯ ಕದನ ವಿರಾಮ ಮಾತುಕತೆಯ ಭಾಗವಾಗಿದೆ. ಆದರೆ, ಈ ಬಗ್ಗೆ ಯಾವುದೇ ಒಪ್ಪಂದವು ಅಂತಿಮವಾಗಿಲ್ಲ ಎಂದು ವರದಿಯು ತಿಳಿಸಿದೆ.
ಈ ಮಧ್ಯೆ ಶ್ವೇತಭವನದ ರಾಯಭಾರಿ ಸ್ಟೀವ್ ವಿಟ್ಕಾಫ್ ಕದನ ವಿರಾಮ ಮಾತುಕತೆಗಳಿಗೆ ಸಂಬಂಧಿಸಿದಂತೆ ಖತರ್ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಲು ದೋಹಾಗೆ ಪ್ರಯಾಣಿಸಲು ತೀರ್ಮಾನಿಸಿದ್ದರು. ಆದರೆ, ಹಮಾಸ್ನಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅವರು ಮಂಗಳವಾರ ರಾತ್ರಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯು ತಿಳಿಸಿದೆ.
ಈಗ 59 ಒತ್ತೆಯಾಳುಗಳು ಹಮಾಸ್ನ ವಶದಲ್ಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇಸ್ರೇಲಿ ಗುಪ್ತಚರ ಇಲಾಖೆಯ ಪ್ರಕಾರ, ಹಮಾಸ್ ವಶದಲ್ಲಿ ಪ್ರಸ್ತುತ 22 ಒತ್ತೆಯಾಳುಗಳು ಜೀವಂತವಾಗಿದ್ದಾರೆ. ಒತ್ತೆಯಾಳುಗಳಲ್ಲಿ ಎಡನ್ ಅಲೆಕ್ಸಾಂಡರ್(21) ಸೇರಿದಂತೆ ಐವರು ಅಮೆರಿಕನ್ನರು ಇದ್ದಾರೆ, ಅವರು ಜೀವಂತವಾಗಿದ್ದಾರೆ ಎಂದು ಹೇಳಲಾಗಿದೆ.
ಗಾಝಾ ಕದನ ವಿರಾಮಕ್ಕೆ ಸಂಬಂಧಿಸಿ 42 ದಿನಗಳ ಕದನ ವಿರಾಮ ಒಪ್ಪಂದ ಶನಿವಾರ ಮುಕ್ತಾಯಗೊಂಡಿತು. ಯುದ್ಧ ಪುನರಾರಂಭಗೊಳ್ಳದಿದ್ದರೂ, ಇಸ್ರೇಲ್ ಗಾಝಾಕ್ಕೆ ಎಲ್ಲಾ ಮಾನವೀಯ ನೆರವನ್ನು ಸ್ಥಗಿತಗೊಳಿಸಿದೆ.