ಅಜಿತ್ ದೋವಲ್ ಗೆ ಸಮನ್ಸ್ ಕೊಡಿಸಿದ ಪನ್ನೂನ್ ಹೇಳಿಕೆಯನ್ನು ತಳ್ಳಿಹಾಕಿದ ಅಮೆರಿಕ ಕೋರ್ಟ್

ಅಜಿತ್ ದೋವಲ್ | Photo : NDTV
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿ ವೇಳೆ ಫೆಬ್ರವರಿ 12-13ರಂದು ಜತೆಯಲ್ಲಿದ್ದ ಎನ್ ಎಸ್ ಎ ಅಜಿತ್ ದೋವಲ್ ಅವರಿಗೆ ನೋಟಿಸ್ ಕೊಡಿಸುವಲ್ಲಿ ತಾನು ಯಶಸ್ವಿಯಾಗಿದ್ದಾಗಿ ಖಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ನೀಡಿದ ಹೇಳಿಕೆಯನ್ನು ಅಮೆರಿಕ ನ್ಯಾಯಾಲಯ ತಳ್ಳಿಹಾಕಿದೆ.
ಮೋದಿ ಮತ್ತು ದೋವಲ್ ಅವರು ತಂಗಿದ್ದ ಬ್ಲೇರ್ ಹೌಸ್ ಅಧ್ಯಕ್ಷೀಯ ಅತಿಥಿಗೃಹದ ಹೊರಗೆ ನೋಟಿಸ್ ಇಟ್ಟುಹೋಗುವ ಸಿಬ್ಬಂದಿಯ ಪ್ರಯತ್ನವನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಏಜೆಂಟ್ ಗಳು ವಿಫಲಗೊಳಿಸಿದ್ದು, ನೋಟಿಸ್ ನೀಡಲು ಬಂದ ಸಿಬ್ಬಂದಿಯನ್ನು ಬಂಧಿಸುವ ಬೆದರಿಕೆ ಹಾಕಿದ್ದಾಗಿ ಪನ್ನೂನ್ ಪರ ವಕೀಲರು ಬರೆದ ಪತ್ರಕ್ಕೆ ನ್ಯಾಯಾಲಯ ಉತ್ತರಿಸಿದೆ. ನೋಟಿಸ್ ನೀಡಲು ಬಂದಿದ್ದ ವ್ಯಕ್ತಿ ಪಕ್ಕದ ಸ್ಟಾರ್ ಬಕ್ಸ್ ಮಳಿಗೆಯಲ್ಲಿ ನೋಟಿಸ್ ಇಟ್ಟುಹೋಗಿದ್ದು, ಇದು ನೋಟಿಸ್ ತಲುಪಿದೆ ಎನ್ನುವುದನ್ನು ಖಾತರಿಪಡಿಸಲು ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪನ್ನೂನ್ ಪರ ವಕೀಲ ಬರೆದ ಪತ್ರವನ್ನು ಪರಾಮರ್ಶಿಸಿದ ನ್ಯೂಯಾರ್ಕ್ ದಕ್ಷಿಣ ಜಿಲ್ಲೆಯ ನ್ಯಾಯಾಧೀಶರು, "ಕೋರ್ಟ್ಗ ಗೆ ಅಗತ್ಯವಿರುವಂತೆ ದೂರಿನ ಪ್ರತಿಯನ್ನು ಹೋಟೆಲ್ ವ್ಯವಸ್ಥಾಪಕ ಸದಸ್ಯರಿಗೆ ಅಥವಾ ಸಿಬ್ಬಂದಿಗೆ ಇಲ್ಲವೇ ಯಾವುದೇ ಅಧಿಕಾರಿಗಳಿಗೆ ಅಥವಾ ದೋವಲ್ ಅವರ ಭದ್ರತಾ ಸಿಬ್ಬಂದಿಗೆ ನೀಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ನೋಟಿಸ್ ನೀಡಿಲ್ಲ ಎನ್ನುವ ಭಾರತದ ವಾದವನ್ನು ಇದು ದೃಢಪಡಿಸಿದೆ.
ಪನ್ನೂನ್ ಹತ್ಯೆ ಪ್ರಯತ್ನ ಪ್ರಕರಣದಲ್ಲಿ ಭಾರತ ಸರ್ಕಾರದ ಏಜೆಂಟ್ ವಿಕಾಸ್ ಯಾದವ್ ಎಂಬಾತನ ಕೈವಾಡವಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪನ್ನೂನ್ ಹೂಡಿದ್ದ ಸಿವಿಲ್ ದಾವೆಯಲ್ಲಿ ಅಮೆರಿಕದ ಕೋರ್ಟ್ ಕಳೆದ ಸೆಪ್ಟೆಂಬರ್ ನಲ್ಲಿ ಸಮನ್ಸ್ ನೀಡಲು ಆದೇಶಿಸಿತ್ತು.