ಸಕ್ಕರೆ ಖಾಯಿಲೆ ಔಷಧ ಪ್ರಚಾರಕ್ಕೆ ನನ್ನ ಡೀಪ್ ಫೇಕ್ ವೀಡಿಯೊ ಬಳಕೆ: ಪತ್ರಕರ್ತ ರವೀಶ್ ಕುಮಾರ್ ಆರೋಪ
ರವೀಶ್ ಕುಮಾರ್ | Photo: PTI
ಮುಂಬೈ: ಸಕ್ಕರೆ ಕಾಯಿಲೆಯ ಔಷಧವನ್ನು ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಡೀಪ್ ಫೇಕ್ ವೀಡಿಯೊವನ್ನು ಬಳಸಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಗುರುವಾರ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ ಸಕ್ಕರೆ ಕಾಯಿಲೆಯ ಔಷಧವನ್ನು ಪ್ರಚಾರ ಮಾಡಲು ನನ್ನ ಮುಖ ಹಾಗೂ ಧ್ವನಿಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ.
‘‘ಸಕ್ಕರೆ ಕಾಯಿಲೆಯ ಔಷಧದ ಕುರಿತು ಜಾಹೀರಾತು ನೀಡಿದ್ದೀರಾ ಎಂದು ಕಳೆದ ಕೆಲವು ದಿನಗಳಿಂದ ಜನರು ನನ್ನಲ್ಲಿ ಪ್ರಶ್ನಿಸುತ್ತಿದ್ದಾರೆ’’ ಎಂದು ರವೀಶ್ ಕುಮಾರ್ ಅವರು ‘ಎಕ್ಸ್’ನಲ್ಲಿ ಶೇರ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
‘‘ವೀಡಿಯೊದಲ್ಲಿ ನನ್ನ ಮುಖ ನೋಡಿದ ಹಾಗೂ ಧ್ವನಿ ಕೇಳಿದ ಬಳಿಕ ಹಲವು ಜನರು ಔಷಧವನ್ನು ಖರೀದಿಸುತ್ತಿದ್ದಾರೆ. ದಯವಿಟ್ಟು ಈ ನಕಲಿ ವೀಡಿಯೊ ಬಲೆಗೆ ಬೀಳಬೇಡಿ. ಕೆಲವರು ನನ್ನ ಮುಖ ಹಾಗೂ ಧ್ವನಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಯಾವುದೇ ಉತ್ಪನ್ನವನ್ನು ಪ್ರಚಾರ ಮಾಡುತ್ತಿಲ್ಲ್ಲ’’ ಎಂದು ಅವರು ಹೇಳಿದ್ದಾರೆ.
ರವೀಶ್ ಕುಮಾರ್ ಅವರಲ್ಲದೆ, ಇತರ ಸುದ್ದಿ ನಿರೂಪಕರು ಈ ಔಷಧವನ್ನು ಪ್ರಚಾರ ಮಾಡುತ್ತಿರುವ ವೀಡಿಯೊದ ಬಗ್ಗೆ ‘ಬೂಮ್ಲೈವ್’ ವರದಿ ಮಾಡಿದೆ. ಈ ನಿರೂಪಕರಲ್ಲಿ ಅರ್ನಬ್ ಗೋಸ್ವಾಮಿ, ಅಂಜನಾ ಓಂ ಕಶ್ಯಪ್ ಹಾಗೂ ಸುಧೀರ್ ಚೌಧರಿ ಸೇರಿದ್ದಾರೆ.