ಉತ್ತರ ಪ್ರದೇಶ | ಪಿಸ್ತೂಲ್ ಇದೆ ಎಂದು ಬೆದರಿಸಿ ಬ್ಯಾಂಕ್ನಿಂದ 40 ಲಕ್ಷ ರೂ. ದರೋಡೆ!
PC : freepik.com
ಲಕ್ನೋ : ಆಘಾತಕಾರಿ ಘಟನೆಯೊಂದರಲ್ಲಿ, ಮಂಗಳವಾರ ವ್ಯಕ್ತಿಯೊಬ್ಬ ಉತ್ತರಪ್ರದೇಶದ ಶಾಮಿಲ್ನಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ನಿಂದ 40 ಲಕ್ಷ ರೂಪಾಯಿ ದರೋಡೆ ಮಾಡಿದ್ದಾನೆ.
ದುಷ್ಕರ್ಮಿಯು ಮ್ಯಾನೇಜರ್ರ ಕೋಣೆಗೆ ನುಗ್ಗಿ, ತಾನು 38.5 ಲಕ್ಷ ರೂ. ಗೃಹ ಸಾಲವನ್ನು ಹೊಂದಿದ್ದೇನೆ ಹಾಗೂ ಅಷ್ಟು ಹಣವನ್ನು ತಕ್ಷಣ ಪಾವತಿಸದಿದ್ದರೆ ತನ್ನ ಮನೆ ಹರಾಜಾಗುತ್ತದೆ ಎಂದು ಹೇಳಿದನು ಎಂದು ಪೊಲೀಸರು ತಿಳಿಸಿದ್ದಾರೆ. ಬಾಕಿಯಿರುವ ಅಷ್ಟು ಮೊತ್ತವನ್ನು ಪಾವತಿಸದಿದ್ದರೆ ತನ್ನ ಮಕ್ಕಳು ನಿರಾಶ್ರಿತರಾಗುತ್ತಾರೆ ಎಂಬುದಾಗಿಯೂ ಅವನು ಅವಲತ್ತುಕೊಂಡನು ಎನ್ನಲಾಗಿದೆ.
ಅವನ ಕೈಯಲ್ಲಿ ಒಂದು ಪಿಸ್ತೂಲು ಮತ್ತು ಒಂದು ಆತ್ಮಹತ್ಯಾ ಪತ್ರವಿತ್ತು ಎಂದು ಮ್ಯಾನೇಜರ್ ಹೇಳಿದ್ದಾರೆ. ಮ್ಯಾನೇಜರ್ರ ಕೋಣೆಯಲ್ಲಿ ಅರ್ಧ ಗಂಟೆ ಕುಳಿತುಕೊಂಡು ಸಾಲ ಪಡೆಯುವ ಬಗ್ಗೆ ಅವನು ಮಾತನಾಡುತ್ತಿದ್ದನು ಎನ್ನಲಾಗಿದೆ.
ಅವನು ಒಮ್ಮೆಲೆ, ತನಗೆ 40 ಲಕ್ಷ ರೂಪಾಯಿ ಕೊಡದಿದ್ದರೆ ಒಂದೋ ಬ್ಯಾಂಕ್ ಮ್ಯಾನೇಜರ್ನನ್ನು ಕೊಲ್ಲುತ್ತೇನೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬುದಾಗಿ ಮ್ಯಾನೇಜರ್ಗೆ ಬೆದರಿಕೆ ಹಾಕಿದನು ಎನ್ನಲಾಗಿದೆ.
ಬ್ಯಾಂಕ್ ಸಿಬ್ಬಂದಿ 40 ಲಕ್ಷ ರೂ. ಮೊತ್ತವನ್ನು ನೀಡಿದ ಬಳಿಕ, ಅವನು ಪಿಸ್ತೂಲನ್ನು ಮ್ಯಾನೇಜರ್ರ ಬೆನ್ನಿಗೆ ಇಟ್ಟು, ತನ್ನನ್ನು ಹೊರಗೆ ಕರೆದುಕೊಂಡು ಹೋಗುವಂತೆ ಇಬ್ಬರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದನು ಎಂದು ಮ್ಯಾನೇಜರ್ ಹೇಳಿದ್ದಾರೆ. ಆ ಅಧಿಕಾರಿಗಳು ಸುಮಾರು 25 ಜನರ ಎದುರೇ ಆತನನ್ನು ಬ್ಯಾಂಕ್ನ ಹೊರಗೆ ಕರೆದುಕೊಂಡು ಹೋದರು ಎಂದು ತಿಳಿದು ಬಂದಿದೆ.