ಉತ್ತರ ಪ್ರದೇಶ | ಪಟಲ್ ಎಕ್ಸ್ ಪ್ರೆಸ್ ರೈಲನ್ನು ಹಳಿ ತಪ್ಪಿಸಲು ಯತ್ನಿಸುತ್ತಿದ್ದ ಸತ್ಯಂ ಯಾದವ್ ಬಂಧನ
ಸಾಂದರ್ಭಿಕ ಚಿತ್ರ
ಬಾಂದಾ (ಉತ್ತರ ಪ್ರದೇಶ) : ಗುರುವಾರ ರಾತ್ರಿ ಉತ್ತರ ಪ್ರದೇಶದ ಲಲಿತ್ ಪುರ್ ಜಿಲ್ಲೆಯ ಜಖೌರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲಿನ ಹಳಿಗಳ ಮೇಲೆ ಉಕ್ಕಿನ ಸಲಾಕೆಗಳನ್ನಿಟ್ಟು ಪಟಲ್ ಎಕ್ಸ್ ಪ್ರೆಸ್ ರೈಲನ್ನು ಹಳಿ ತಪ್ಪಿಸಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಡೆಲ್ವಾರಾ ರೈಲ್ವೆ ನಿಲ್ದಾಣದ ಪ್ರದೇಶದಲ್ಲಿ ಸಂಚರಿಸುತ್ತಿದ್ದ ರೈಲು ಸಂಖ್ಯೆ 12624(ಪಟಲ್ ಎಕ್ಸ್ ಪ್ರೆಸ್)ಯ ಇಂಜಿನ್ ಗೆ ಸಲಾಕೆಯೊಂದು ಸಿಲುಕಿಕೊಂಡು, ಅದರಿಂದ ಕಿಡಿ ಹೊರಬರತೊಡಗಿತ್ತು. ಇದನ್ನು ಗಮನಿಸಿದ ಗೇಟ್ ಮನ್ ನೀಡಿದ ಮಾಹಿತಿಯಂತೆ ಲೋಕೋಪೈಲಟ್ ರೈಲನ್ನು ಸ್ಥಗಿತಗೊಳಿಸಿದ್ದರು. ಆ ಮೂಲಕ ಬಹು ದೊಡ್ಡ ಅಪಘಾತವೊಂದನ್ನು ತಪ್ಪಿಸಿದ್ದರು.
ಈ ಕುರಿತು ಶನಿವಾರ ಪ್ರತಿಕ್ರಿಯಿಸಿದ ಲಲಿತ್ ಪುರ್ ಪೊಲೀಸ್ ವರಿಷ್ಠಾಧಿಕಾರಿ ಮುಹಮ್ಮದ್ ಮುಸ್ತಾಕ್, “ಗುರುವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಉಕ್ಕಿನ ಸಲಾಕೆ ಬಳಸಿ ರೈಲಿನ ಹಳಿ ತಪ್ಪಿಸಲು ಯತ್ನಿಸಿದ್ದಾನೆ ಎಂದು ಡೆಲ್ವಾರಾ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಜಖೌರಾ ಪೊಲೀಸ್ ಠಾಣೆಗೆ ಶುಕ್ರವಾರ ದೂರು ಸಲ್ಲಿಸಿದ್ದರು” ಎಂದು ತಿಳಿಸಿದ್ದಾರೆ.
ಈ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಂಡಾಗ, ಘಟನಾ ಸ್ಥಳದ ಬಳಿ ರೈಲ್ವೆ ಸಿಬ್ಬಂದಿಗಳು ಹಲವಾರು ಉಕ್ಕಿನ ಸಲಾಕೆ ಮತ್ತಿತರ ಸಾಮಗ್ರಿಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಯಿತು ಎಂದು ಅವರು ಹೇಳಿದ್ದಾರೆ.
ಸತ್ಯಂ ಯಾದವ್ (32) ಎಂಬ ವ್ಯಕ್ತಿ ಅಲ್ಲಿಂದ ಉಕ್ಕಿನ ಸಲಾಕೆಗಳನ್ನು ಕದ್ದು, ಬೇರೆಡೆ ಮಾರಾಟ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ಸತ್ಯಂ ಯಾದವ್ ನಿವಾಸದ ಮೇಲೆ ದಾಳಿ ನಡೆಸಿದ ಜಖೋರಾ ಪೊಲೀಸರು, ಶನಿವಾರ ಆತನನ್ನು ಬಂಧಿಸಿದ್ದಾರೆ. ಕದ್ದಿರುವ ಉಕ್ಕಿನ ಸಲಾಕೆಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಆತನ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ, ನಾನು ಉಕ್ಕಿನ ಸಲಾಕೆಗಳನ್ನು ಕದ್ದ ನಂತರ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದೆ. ಆಗ ದಿಢೀರನೇ ಪಟಲ್ ಎಕ್ಸ್ ಪ್ರೆಸ್ ಬಂದಿತು. ಅವಸರದಲ್ಲಿ ನಾನು ಉಕ್ಕಿನ ಸಲಾಕೆಗಳನ್ನು ರೈಲ್ವೆ ಹಳಿಯ ಮೇಲೆ ಎಸೆದು, ಅಲ್ಲಿಂದ ಪರಾರಿಯಾದೆ ಎಂದು ತಿಳಿಸಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದ ರೈಲ್ವೆ ಹಳಿಗಳ ಗ್ಯಾಸ್ ಸಿಲಿಂಡರ್, ಕಂಬಗಳು, ಬಂಡೆಗಲ್ಲುಗಳು, ಕಲ್ಲುಗಳು ಹಾಗೂ ಇನ್ನಿತರ ವಸ್ತುಗಳು ಕಂಡು ಬರುತ್ತಿರುವುದರಿಂದ ಈ ಘಟನೆ ಮಹತ್ವ ಪಡೆದುಕೊಂಡಿದೆ.