ಉತ್ತರ ಪ್ರದೇಶ | ಆದೇಶದಲ್ಲೇ ಲವ್ ಜಿಹಾದ್ ಉಲ್ಲೇಖಿಸಿದ, ಈ ಹಿಂದೆ ತೀರ್ಪಿನಲ್ಲೇ ಆದಿತ್ಯನಾಥ್ ರನ್ನು ಶ್ಲಾಘಿಸಿದ್ದ ನ್ಯಾಯಾಧೀಶರ ಪರಿಚಯ
ನ್ಯಾಯಾಧೀಶ ರವಿಕುಮಾರ್ ದಿವಾಕರ್ | PC: X
ಉತ್ತರಪ್ರದೇಶದ ಜಿಲ್ಲಾ ನ್ಯಾಯಾಧೀಶ ರವಿಕುಮಾರ್ ದಿವಾಕರ್ ತಮ್ಮ ಆದೇಶವೊಂದರಲ್ಲಿ ಲವ್ ಜಿಹಾದ್ ಕುರಿತು ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಚರ್ಚೆಗೆ ಗ್ರಾಸವಾಗಿದ್ದು ನ್ಯಾಯಾಂಗದ ಶಿಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ.
ಅತ್ಯಾಚಾರ ಆರೋಪಕ್ಕಾಗಿ ಮುಸ್ಲಿಂ ಯುವಕನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸುವ ವೇಳೆ ಅವರು ತೀರ್ಪಿನಲ್ಲಿ ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ವಿವಾಹವಾಗುವ ಮೂಲಕ ಇಸ್ಲಾಂಗೆ ಮತಾಂತರ ಮಾಡಿಸುತ್ತಿದ್ದಾರೆ ಎಂದಿದ್ದರು.
ಲವ್ ಜಿಹಾದ್ನ ಮುಖ್ಯ ಉದ್ದೇಶ ನಿರ್ದಿಷ್ಟ ಧರ್ಮದ ಅರಾಜಕತಾವಾದಿಗಳು ಅಂತರರಾಷ್ಟ್ರೀಯ ಸಂಚು ಮತ್ತು ಜನಾಂಗೀಯ ಯುದ್ಧದ ಮೂಲಕ ಭಾರತದ ಮೇಲೆ ಪ್ರಭುತ್ವ ಸಾರುವುದಾಗಿದೆ ಎಂದು ಅವರು ಹೇಳಿದ್ದರು.
ಈ ನ್ಯಾಯಾಧೀಶ ದಿವಾಕರ್ ಸುದ್ದಿಯಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ವರ್ಷದ ಮಾರ್ಚ್ನಲ್ಲಿ ಅವರು ತಮ್ಮ ಆದೇಶವೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಹೊಗಳಿದ್ದರು.
ಸಮರ್ಪಣೆ ಮತ್ತು ತ್ಯಾಗದಿಂದ ಅಧಿಕಾರ ನಡೆಸುತ್ತಿರುವ ಧಾರ್ಮಿಕ ವ್ಯಕ್ತಿಗೆ ಪರಿಪೂರ್ಣ ಉದಾಹರಣೆ ಎಂದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಎಂದು ಶ್ಲಾಘಿಸಿದ್ದರು.
ಭಾರತದಲ್ಲಿನ ಗಲಭೆಗಳಿಗೆ ಮುಖ್ಯ ಕಾರಣವೆಂದರೆ ಇಲ್ಲಿನ ರಾಜಕೀಯ ಪಕ್ಷಗಳು ಒಂದು ನಿರ್ದಿಷ್ಟ ಧರ್ಮದ ತುಷ್ಟೀಕರಣದಲ್ಲಿ ತೊಡಗಿರುವುದು. ಇದರಿಂದಾಗಿ ಆ ನಿರ್ದಿಷ್ಟ ಧರ್ಮದ ಪ್ರಮುಖ ವ್ಯಕ್ತಿಗಳ ಧೈರ್ಯ ಹೆಚ್ಚುತ್ತದೆ. ಗಲಭೆ ಇತ್ಯಾದಿಗಳನ್ನು ಮಾಡಿದರೂ, ಅಧಿಕಾರಸ್ಥರ ರಕ್ಷಣೆ ಇರುವುದರಿಂದ ತಮ್ಮ ಒಂದು ಕೂದಲೂ ಕೊಂಕುವುದಿಲ್ಲ ಎಂದುಕೊಂಡಿದ್ದಾರೆ ಎಂದು ಕೂಡ ಆಕ್ಷೇಪಿಸಿದ್ದರು ಈ ನ್ಯಾಯಾಧೀಶರು.
ಮುಸ್ಲಿಂ ಧರ್ಮಗುರು ಮೌಲಾನಾ ತೌಕೀರ್ ರಝಾ ಖಾನ್ ಅವರಿಗೆ 2010ರ ಬರೇಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡುವ ವೇಳೆ ನ್ಯಾಯಾಧೀಶ ದಿವಾಕರ್ ಈ ಮಾತುಗಳನ್ನಾಡಿದ್ದರು.
ಅಲಾಹಾಬಾದ್ ಹೈಕೋರ್ಟ್ ಈ ಹೇಳಿಕೆಗಳನ್ನು ಆದೇಶದಿಂದ ತೆಗೆದುಹಾಕಿತ್ತು. ನ್ಯಾಯಸ್ಥಾನದಲ್ಲಿರುವವರು ಆದೇಶಗಳಲ್ಲಿ ವೈಯಕ್ತಿಕ ಅಥವಾ ಪೂರ್ವಗ್ರಹದ ಅಭಿಪ್ರಾಯ ವ್ಯಕ್ತಪಡಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿತ್ತು.
ರಾಜಕೀಯ ಮೆತ್ತಿಕೊಂಡ ಮತ್ತು ವೈಯಕ್ತಿಕ ದೃಷ್ಟಿಯ ಕೆಲ ಅನಗತ್ಯ ಹೇಳಿಕೆಗಳನ್ನು ನ್ಯಾಯಾಧೀಶ ದಿವಾಕರ್ ನೀಡಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ ಅವರು ಅವಲೋಕಿಸಿದ್ದರು.
ನ್ಯಾಯಾಂಗ ತೀರ್ಪುಗಳು ಸಾರ್ವಜನಿಕವಾಗಿರುತ್ತವೆ. ಇಂತಹ ಆದೇಶಗಳು ಜನರು ತಪ್ಪು ತಿಳುವಳಿಕೆ ಬೆಳೆಸಿಕೊಳ್ಳಲು ಕಾರಣವಾಗುವ ಸಾಧ್ಯತೆಯಿದೆ. ನ್ಯಾಯಾಂಗ ಅಧಿಕಾರಿಗಳು ತಮ್ಮ ಎದುರಿರುವ ವಿಷಯವನ್ನೇ ಕೇಂದ್ರೀಕರಿಸಿ ಬಹಳ ಸೂಕ್ಷ್ಮವಾಗಿ ತಮ್ಮ ಅಭಿಪ್ರಾಯ ಹೇಳಬೇಕು ಹಾಗು ಆ ವಿಷಯಕ್ಕೆ ಸಂಬಂಧಿಸದ ವಿಷಯಗಳನ್ನು ಹೇಳಬಾರದು ಎಂದು ಹೈಕೋರ್ಟ್ ಸೂಚನೆ ನೀಡಿತ್ತು.
ಜ್ಞಾನವಾಪಿ-ಕಾಶಿ ವಿಶ್ವನಾಥ ಪ್ರಕರಣದಲ್ಲಿ ಆದೇಶ ನೀಡಿದ ನಂತರ ತನಗೆ ಬೆದರಿಕೆ ಇದೆ ಎಂದು ಅಲಾಹಾಬಾದ್ ಹೈಕೋರ್ಟ್ ಗೆ ತಿಳಿಸುವ ಮೂಲಕವೂ ನ್ಯಾಯಾಧೀಶ ದಿವಾಕರ್ ಸುದ್ದಿಯಲ್ಲಿದ್ದರು.
ಅವರು 2022ರಲ್ಲಿ ಜ್ಞಾನವಾಪಿ ಮಸೀದಿ ಆವರಣದ ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದರು.
ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ವೇಳೆ ಶಿವಲಿಂಗ ಹೋಲುವ ಆಕೃತಿ ಪತ್ತೆಯಾದ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ನಿರ್ಬಂಧಿಸುವಂತೆ ಅವರು ಆದೇಶಿಸಿದ್ದರು.
ಆದರೆ ಈ ಆದೇಶವನ್ನು ಬಳಿಕ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮತ್ತೊಬ್ಬ ನ್ಯಾಯಾಧೀಶರಿಗೆ ವರ್ಗಾಯಿಸಿತ್ತು.
ಈ ಸಿವಿಲ್ ಕೇಸಿನ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ವಾರಾಣಸಿ ಸಿವಿಲ್ ಜಡ್ಜ್ ಎದುರಿರುವ ಈ ಕೇಸನ್ನು ಯುಪಿ ನ್ಯಾಯಾಂಗ ಸೇವೆಯ ಹಿರಿಯ ಹಾಗು ಅನುಭವೀ ನ್ಯಾಯಾಧೀಶರೆದುರು ವಿಚಾರಣೆಗೆ ವರ್ಗಾಯಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಸಮೀಕ್ಷೆಗೆ ತಾನು ಕರೆ ನೀಡಿದ್ದಕ್ಕಾಗಿ ಮುಸ್ಲಿಂ ಸಂಘಟನೆಯಿಂದ ಬೆದರಿಕೆ ಕರೆ ಬರುತ್ತಿವೆ ಎಂದು ಎರಡು ವರ್ಷಗಳ ಬಳಿಕ ನ್ಯಾ. ದಿವಾಕರ್ ಆರೋಪಿಸಿದ್ದರು.
ತನಗೆ ಬೆದರಿಕೆ ಇರುವ 32 ಪುಟಗಳ ಪತ್ರ ಬಂದಿದ್ದು, ವಾರಾಣಸಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ದಿವಾಕರ್ ಹೇಳಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.
2024ರ ಜೂನ್ ನಲ್ಲಿ ಲಕ್ನೋ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಲಹಾಬಾದ್ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದು, ದಿವಾಕರ್ ಅವರಿಗೆ ಜೀವ ಬೆದರಿಕೆ ಇರುವುದನ್ನು ಉಲ್ಲೇಖಿಸಿ ಭದ್ರತೆಗಾಗಿ ಕೇಳಿದ್ದರು.
ಉತ್ತರ ಪ್ರದೇಶದವರಾದ ದಿವಾಕರ್, 1999ರಲ್ಲಿ ತಮ್ಮ ಇಂಟರ್ಮೀಡಿಯೇಟ್ ಓದಿನ ಬಳಿಕ 2002ರಲ್ಲಿ ಬಿಕಾಂ, 2005ರಲ್ಲಿ ಎಲ್ಎಲ್ಬಿ ಮತ್ತು 2007ರಲ್ಲಿ ಎಲ್ಎಲ್ಎಂ ಪದವಿ ಪಡೆದರು.
2009ರಲ್ಲಿ ಉತ್ತರ ಪ್ರದೇಶದ ಅಜಂಗಢದಲ್ಲಿ ಮುನ್ಸಿಫ್ (ಸಿವಿಲ್ ನ್ಯಾಯಾಧೀಶರು, ಜೂನಿಯರ್ ವಿಭಾಗ) ಆಗಿ ನೇಮಕಗೊಂಡರು.
2023ರಲ್ಲಿ ಅವರನ್ನು ಬರೇಲಿಯ ತ್ವರಿತ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಿಸಲಾಯಿತು.
ದಿ ಪ್ರಿಂಟ್ ವರದಿಯ ಪ್ರಕಾರ, ದಿವಾಕರ್ ಬಿಜೆಪಿ ನಾಯಕ, ಮಾಜಿ ಸಚಿವ ಚಂದ್ರ ಕಿಶೋರ್ ಸಿಂಗ್ ಅವರ ಅಳಿಯ. ಚಂದ್ರ ಕಿಶೋರ್ ಸಿಂಗ್ ಮೂರು ಬಾರಿ ಎಮ್ಮೆಲ್ಲೆ ಆಗಿದ್ದು ಈ ಹಿಂದಿನ ಬಿಜೆಪಿ ಸಿಎಂ ಗಳಾದ ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ ಹಾಗು ರಾಜನಾಥ್ ಸಿಂಗ್ ಅವರ ಸರಕಾರದಲ್ಲಿ ಸಚಿವರಾಗಿದ್ದರು.
ಆದಿತ್ಯನಾಥ್ ಅವರ ನಿಕಟವರ್ತಿ ಎಂದೂ ಹೇಳಲಾಗುತ್ತದೆ.
ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿರುವ ದಿವಾಕರ್, ತಮ್ಮ ಎಕ್ಸ್ ಖಾತೆಯಲ್ಲಿ ಪ್ರೇರಣಾತ್ಮಕ ಮತ್ತು ಧಾರ್ಮಿಕ ವಿಚಾರಗಳ ಪೋಸ್ಟ್ ಹಂಚಿಕೊಳ್ಳುತ್ತಾರೆ.
ಸೌಜನ್ಯ : barandbench.com