ಉತ್ತರ ಪ್ರದೇಶ| ತನ್ನ ದೂರು ಸ್ವೀಕರಿಸಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ ದಲಿತ ವ್ಯಕ್ತಿ; ಪೊಲೀಸ್ ಅಧಿಕಾರಿ ಅಮಾನತು
ಸಾಂದರ್ಭಿಕ ಚಿತ್ರ Photo- PTI
ಬಲರಾಮಪುರ: ತುಂಡು ಭೂಮಿ ಅತಿಕ್ರಮಣದ ಕುರಿತ ತನ್ನ ದೂರು ಸ್ವೀಕರಿಸಿಲ್ಲ ಎಂದು ಆರೋಪಿಸಿದ ಬಳಿಕ ದಲಿತ ವ್ಯಕ್ತಿಯೋರ್ವ ಆತ್ಮಾಹುತಿಗೆ ಯತ್ನಿಸಿದ ಕುರಿತಂತೆ ಬಲರಾಮ್ಪುರದ ಪೊಲೀಸ್ ಅಧೀಕ್ಷಕರು ಗೈಡಾಸ್ ಬುಝುರ್ಗ್ ಠಾಣಾಧಿಕಾರಿ (ಎಸ್ಒ) ಅವರನ್ನು ಅಮಾನತು ಮಾಡಿದ್ದಾರೆ.
ವಿವಾದಾತ್ಮಕ ಭೂಮಿಯಲ್ಲಿ ಇನ್ನೊಂದು ಗುಂಪು ಕಂಬಗಳನ್ನು ನಿರ್ಮಾಣ ಮಾಡುತ್ತಿರುವುದಾಗಿ ಪ್ರತಿಪಾದಿಸಿ ದಲಿತ ವ್ಯಕ್ತಿ ದೂರು ದಾಖಲಿಸಿದ ಹೊರತಾಗಿಯೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸ್ ಅಧೀಕ್ಷಕ ಕೇಶವ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಕ್ಟೋಬರ್ 24ರಂದು ದಲಿತ ವ್ಯಕ್ತಿ ರಾಮ್ ಬುಜ್ಹರತ್ ದಹನಶೀಲ ದ್ರವವನ್ನು ಮೈಮೇಲೆ ಸುರಿದುಕೊಂಡು ಆತ್ಮಾಹುತಿಗೆ ಪ್ರಯತ್ನಿಸಿದ್ದ. ಅನಂತರ ಆತನನ್ನು ಲಕ್ನೋದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಗೈಡಾಸ್ ಬುಝುರ್ಗ್ ಪೊಲೀಸ್ ಠಾಣೆಯ ಅಧಿಕಾರಿ ಪವನ್ ಕುಮಾರ್ ತಪ್ಪೆಸಗಿರುವುದನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಮ್ರತಾ ಶ್ರೀವಾತ್ಸವ್ ಅವರು ತಮ್ಮ ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ. ತನಿಖೆಯ ವರದಿಯ ಆಧಾರದಲ್ಲಿ ಅವರನ್ನು ವಜಾಗೊಳಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಈ ಪ್ರಕರಣದ ಕುರಿತಂತೆ ಮ್ಯಾಜಿಸ್ಟೇಟ್ ತನಿಖೆಯೊಂದಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ತನಿಖೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.