ಗ್ವಾಲಿಯರ್ ನಲ್ಲಿ ಉತ್ತರಪ್ರದೇಶದ ಸಚಿವ ಮನೋಹರ್ ಲಾಲ್ ಅಂಗರಕ್ಷಕನ ಮೇಲೆ ಹಲ್ಲೆ
PC : X
ಭೋಪಾಲ್: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಉತ್ತರಪ್ರದೇಶದ ಸಚಿವ ಮನೋಹರ್ ಲಾಲ್ ಅವರ ಅಂಗರಕ್ಷಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಸಚಿವರಿಗೆ ಯಾವುದೇ ಗಾಯಗಳಾಗದಿದ್ದರೂ, ಅವರ ಖಾಸಗಿ ಅಂಗರಕ್ಷಕ ಗಾಯಗೊಂಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಾಲ್ವರು ಶಂಕಿತ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಸಚಿವರ ಅಂಗ ರಕ್ಷಕನಿಂದ ಕಸಿದುಕೊಂಡಿದ್ದ ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಕಾರ್ಮಿಕ ಸಚಿವರಾದ ಮನೋಹರ್ ಲಾಲ್ ಅವರು ಆಗ್ರಾದಿಂದ 330 ಕಿಮೀ ದೂರದಲ್ಲಿರುವ ತಮ್ಮ ತವರು ಗ್ರಾಮ ಲಲಿತ್ ಪುರ್ ಗೆ ವಾಪಾಸ್ಸಾಗುವಾಗ ರಾತ್ರಿ 8 ಗಂಟೆಯ ವೇಳೆ ಮಾರ್ಗಮಧ್ಯೆ ಈ ಘಟನೆ ನಡೆದಿದೆ. ಸಚಿವರ ಕಾರಿನ ಮುಂದೆ ಉತ್ತರಪ್ರದೇಶ ಪೊಲೀಸರ ಕಾವಲು ಪಡೆ ವಾಹನಗಳು ಚಲಿಸುತ್ತಿದ್ದರೆ, ಹಿಂದಿನಿಂದ ಗ್ವಾಲಿಯರ್ ಪೊಲೀಸ್ ವಾಹನವೊಂದು ಹಿಂಬಾಲಿಸುತ್ತಿತ್ತು. ಗ್ವಾಲಿಯರ್ ನಿಂದ 20 ಕಿಮೀ ದೂರದಲ್ಲಿರುವ ಬಿಲುವಾ ಪ್ರಾಂತ್ಯದ ಜೌರಾಸಿ ಘಾಟಿ ಬಳಿ ಅಪಘಾತದ ಕಾರಣಕ್ಕೆ ಸಂಚಾರ ದಟ್ಟಣೆಯುಂಟಾಗಿದೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಕಾವಲು ಪಡೆ ಪೊಲೀಸರ ವಾಹನಗಳು ಮುಂದೆ ಚಲಿಸಿದ್ದರೆ, ಗ್ವಾಲಿಯರ್ ಪೊಲೀಸರ ವಾಹನವು ಹಿಂದೆ ಬಿದ್ದಿದೆ.
ಮೂಲಗಳ ಪ್ರಕಾರ, ಸಂಚಾರ ದಟ್ಟಣೆ ತಪ್ಪಿಸುವ ವೇಳೆ ಸಚಿವರ ವಾಹನವು ರಾಂಗ್ ಸೈಡ್ಗೆ ಪ್ರವೇಶಿಸಿದೆ. ಈ ವೇಳೆ ಸ್ಥಳೀಯ ಬೈಕ್ ಸವಾರ ಹಾಗೂ ಸಚಿವರ ಪಿಎಸ್ಒ ನಡುವೆ ವಾಗ್ವಾದ ನಡೆದಿದೆ. ಭದ್ರತಾ ಅಧಿಕಾರಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಯುವಕ ತನ್ನ ಇತರ ಸಹಚರರನ್ನು ಕರೆಸಿಕೊಂಡು ಭದ್ರತಾ ಅಧಿಕಾರಿಯ ಮೇಲೆ ದಾಳಿ ಮಾಡಿ ಅವರಿಂದ ಪಿಸ್ತೂಲ್ ಅನ್ನು ಕಸಿದುಕೊಂಡಿದ್ದಾರೆ ಎಂದು ಗ್ವಾಲಿಯರ್ ಎಸ್ಪಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಆರೋಪಿಗಳಲ್ಲಿ ಒಬ್ಬನನ್ನು ಸ್ಥಳದಲ್ಲೇ ಬಂಧಿಸಿದ್ದಾರೆ. ಸಚಿವರ ವಾಹನವನ್ನು ಟ್ರಾಫಿಕ್ ಕ್ಲಿಯರ್ ಮಾಡಿ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ. ಘಟನೆಗೆ ಸಂಬಂಧಿಸಿ ಬಂಟಿ ಕಮಾರಿಯಾ, ಕಪ್ತಾನ್ ಕಮಾರಿಯಾ, ಭೂಲಾ ಕಮಾರಿಯಾ ಮತ್ತು ಭೂಪೇಂದ್ರ ಕಮಾರಿಯಾ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಬಂಧಿತರಿಂದ ಅಂಗರಕ್ಷಕನಿಂದ ಕಸಿದುಕೊಂಡಿದ್ದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಗ್ವಾಲಿಯರ್ ಎಸ್ಪಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.