ಉತ್ತರಾಖಂಡ | ಹಿಟ್ ಅಂಡ್ ರನ್ ಪ್ರಕರಣ; ನಾಲ್ವರು ಪಾದಚಾರಿಗಳು ಮೃತ್ಯು, ಇಬ್ಬರು ಗಂಭೀರ

ಡೆಹ್ರಾಡೂನ್: ವೇಗವಾಗಿ ನುಗ್ಗಿದ ಮರ್ಸಿಡೆಸ್ ಕಾರು ಫುಟ್ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಲ್ವರು ಕೂಲಿ ಕಾರ್ಮಿಕರಿಗೆ ಢಿಕ್ಕಿ ಹೊಡೆದು ಎಲ್ಲರೂ ಮೃತಪಟ್ಟ ಘಟನೆ ರಾಜಪುರ ರಸ್ತೆಯ ಸಾಯಿ ದೇವಾಲಯ ಬಳಿ ಬುಧವಾರ ಸಂಜೆ ನಡೆದಿದೆ. ಇದೇ ಕಾರು ಢಿಕ್ಕಿ ಹೊಡೆದು ಇಬ್ಬರು ದ್ವಿಚಕ್ರ ವಾಹನ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಚಂಡೀಗಢ ನಂಬರ್ ಪ್ಲೇಟ್ ಹೋಂದಿದ್ದ ಮರ್ಸಿಡೆಸ್ ಕಾರನ್ನು ಅತಿವೇಗವಾಗಿ ಹಾಗೂ ಅಜಾಗರೂಕತೆಯಿಂದ ಓಡಿಸಲಾಗುತ್ತಿತ್ತು. ಇದು ನಾಲ್ವರು ಕೂಲಿಕಾರ್ಮಿಕರು ಮತ್ತು ಒಂದು ಯುಕೆ 07-ಎಇ-5150 ಸಂಖ್ಯೆಯ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ನಾಲ್ವರು ಪಾದಚಾರಿಗಳು ಸ್ಥಳದಲ್ಲೇ ಮೃತಪಟ್ಟರೆ, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಮೃತಪಟ್ಟ ಇಬ್ಬರು ಅಯೋಧ್ಯೆಯ ಮನಶರಾಮ್ (30) ಮತ್ತು ರಂಜೀತ್ (35) ಎಂದು ಗುರುತಿಸಲಾಗಿದ್ದು, ಇತರ ಇಬ್ಬರ ಗುರುತು ಪತ್ತೆಯಾಗಬೇಕಿದೆ. ಉತ್ತರ ಪ್ರದೇಶದ ಹರ್ದೋಯಿ ನಿವಾಸಿ ಧನಿರಾಮ್ ಮತ್ತು ಬಿಹಾರದ ಸೀತಾಮರಿಯ ಮೊಹ್ಮದ್ ಶಕೀಬ್ ಅವರು ಗಾಯಗೊಂಡಿದ್ದು, ಉತ್ತರಾಖಂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಸರ್ಕಾರಿ ಡೂನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಇಬ್ಬರೂ ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಕಾರ್ಮಿಕರ ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದ್ದು, ಪಂಚಾಯತ್ನಾಮಾ ಪ್ರಕ್ರಿಯೆ ನಡೆಯುತ್ತಿದೆ ಎಂದು ಹಿರಿಯ ಎಸ್ಪಿ ಅಜಯ್ ಸಿಂಗ್ ಹೇಳಿದ್ದಾರೆ.
ಕಾರಿನಲ್ಲಿದ್ದವರ ಪತ್ತೆಗೆ ಜಾಲ ಬೀಸಲಾಗಿದ್ದು, ಎಲ್ಲ ಪೊಲೀಸ್ ಠಾಣೆಗಳಿಗೆ ಮತ್ತು ಪೊಲೀಸ್ ನಿಯಂತ್ರಣ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ಮೃತಪಟ್ಟ ಕಾರ್ಮಿಕರು ನದಿ ಪಕ್ಕದ ಕಥಬಂಗ್ಲಾ ಪ್ರದೇಶದಲ್ಲಿ ವಾಸವಿದ್ದು, ಶಿವಂ ಎಂಬ ಗುತ್ತಿಗೆದಾರರ ಅಧೀನದಲ್ಲಿ ಕೆಲಸ ಮಾಡುತ್ತಿದ್ದರು.