ಉತ್ತರಾಖಂಡ ಹಿಂಸಾಚಾರ: ನಾಲ್ವರು ಮೃತ್ಯು, 100ಕ್ಕೂ ಹೆಚ್ಚು ಮಂದಿಗೆ ಗಾಯ
ಗಲಭೆಕೋರರು ವಾಹನಗಳಿಗೆ ಬೆಂಕಿ ಹಚ್ಚಿರುವುದು Photo: PTI
ಡೆಹ್ರಾಡೂನ್: ಉತ್ತರಾಖಂಡದ ಬನ್ಭೂಲ್ ಪುರ ಎಂಬಲ್ಲಿ ಅಕ್ರಮವಾಗಿ ನಿರ್ಮಿಸಿದ್ದು ಎನ್ನಲಾದ ಮದರಸ ಕಟ್ಟಡವನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಗುರುವಾರ ಸಂಜೆ ಭುಗಿಲೆದ್ದ ಹಿಂಸಾಚಾರದಿಂದಾಗಿ ನೈನಿತಾಲ್ ಜಿಲ್ಲೆಯ ಹಲ್ದವಾನಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂದು ವರದಿಯಾಗಿದೆ.
ಘಟನೆ ಹಿನ್ನೆಲೆಯಲ್ಲಿ ಬನ್ಭೂಲ್ ಪುರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಗಲಭೆ ನಡೆಸುವವರ ವಿರುದ್ಧ ಕಂಡಲ್ಲೇ ಗುಂಡು ಹೊಡೆಯಲು ಆದೇಶ ನೀಡಲಾಗಿದೆ.
ಸ್ಥಳೀಯ ಮದರಸ ಧ್ವಂಸಗೊಳಿಸುವ ಕಾರ್ಯಾಚರಣೆಯಲ್ಲಿದ್ದ ಪೊಲೀಸರು ಹಾಗೂ ಪೌರ ಸಿಬ್ಬಂದಿ ಗಾಯಗೊಂಡವರಲ್ಲಿ ಸೇರಿದ್ದಾರೆ. ಸರ್ಕಾರಿ ಭೂಮಿಯಲ್ಲಿ ಮದರಸ ನಿರ್ಮಿಸುವ ವೇಳೆಯೇ ನೋಟಿಸ್ ನೀಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧೀಕ್ಷಕ ಪ್ರಹ್ಲಾದ್ ಮೀನಾ ಹೇಳಿದ್ದಾರೆ.
ಹಿಂಸಾಚಾರದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ಬಹುತೇಕ ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಹಲ್ದವಾನಿಯಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಇಂಟರ್ ನೆಟ್ ಸಂಪರ್ಕವನ್ನು ಕೂಡಾ ಸ್ಥಗಿತಗೊಳಿಸಲಾಗಿದೆ ಎಂದು ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಹೇಳಿದ್ದಾರೆ.
ಗಲಭೆಕೋರರಲ್ಲಿ ಕೆಲವರು ಗುಂಡು ಹಾರಿಸಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗುಂಡಿನ ಗಾಯಗಳಾಗಿದ್ದ ನಾಲ್ಕು ಮಂದಿಯನ್ನು ಆಸ್ಪತ್ರೆಗೆ ತರಲಾಗಿದ್ದು, ಇವರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ವಂದನಾ ವಿವರಿಸಿದ್ದಾರೆ.